ಸಿಡಿ ಹಬ್ಬ ಆಚರಣೆಗೆ ಎಲ್ಲ ರೀತಿಯ ಸಹಕಾರ

6 mlv 1
Published on

ಮಳವಳ್ಳಿ: ಪಟ್ಟಣದ ಎಲ್ಲ ಕೋಮಿನ ಯಜಮಾನರು, ಮುಖಂಡರು ಒಮ್ಮತದಿಂದ ಸಮ್ಮತಿಸಿದರೆ ಫೆ.20ರಿಂದ 23ರ ವರೆಗೆ ಜರುಗುವ ಸಿಡಿ ಹಬ್ಬ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಉಪವಿಭಾಗಾಧಿಕಾರಿ ಶಿವಮೂರ್ತಿ ತಿಳಿಸಿದರು.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಿಡಿ ಹಬ್ಬ ಆಚರಣೆ ಸಂಬಂಧ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಸಿಡಿ ಬಂಡಿ ಹೋಗುವ ಗಂಗಾ ಟಾಕೀಸ್ ಪಕ್ಕದಲ್ಲಿರುವ ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ. ಅಧಿಕಾರಿಗಳು ಹಬ್ಬಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿಸಿ, ಸ್ವಚ್ಛತೆ ಕಾಪಾಡುವುದಲ್ಲದೆ, ಬಡಾವಣೆಯ ಕೆಲವೆಡೆಗಳಲ್ಲಿ ತಾತ್ಕಾಲಿಕ ಶೌಚಗೃಹಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.


ಪುರಸಭೆ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಅನಂತರಾಮ್ ವೃತ್ತದಲ್ಲಿ ದೊಡ್ಡ ಮೋರಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾಗಿ ಪೊಲೀಸರು ಏಕಮುಖ ಸಂಚಾರ ಮಾಡಿ ಸಿದ್ಧಾರ್ಥ ಬಡಾವಣೆ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ. ಇದರಿಂದ ದೊಡ್ಡ ಆ್ಯಕ್ಸಲ್ ವಾಹನಗಳ ಸಂಚಾರದಿಂದ ಬಡಾವಣೆಯ ರಸ್ತೆ ಮಧ್ಯ ಹಾದು ಹೋಗಿರುವ ಮ್ಯಾನ್ ಹೋಲ್ ಕುಸಿದಿದೆ. ಅಲ್ಲದೇ ರಸ್ತೆ ಡಾಂಬರ್ ಕಿತ್ತು ಹಾಳಾಗಿ ಧೂಳಿನಿಂದ ಬಡಾವಣೆ ಜನರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಜರೂರಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಹಬ್ಬದ ವೇಳೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಜತೆಗೆ ಬಡಾವಣೆ ರಸ್ತೆ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿದರು.


ಸಿಡಿ ಬಂಡಿ ಎಳೆಯುವ ನೇತೃತ್ವ ವಹಿಸುವ ಯಜಮಾನ್ ಮೊಗಣ್ಣ ಮಾತನಾಡಿ, ಸಿಡಿ ಬಂಡಿ ಹೋಗುವ ಬೀದಿಗಳಲ್ಲಿ ಯಾವುದೇ ಅಡಚಣೆಯಾಗದಂತೆ ರಸ್ತೆ ಅಭಿವೃದ್ಧಿಪಡಿಸಬೇಕು, ಗಂಗಾಮತ ಬೀದಿಯಲ್ಲಿ ನಲ್ಲಿ ಗುಂಡಿಗಳನ್ನು ಮುಚ್ಚಿಸಬೇಕು, ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಕೊಂಬೆಗಳನ್ನು ಕಡಿಸಬೇಕು. ಸಿಡಿ ಬಂಡಿ ಎಳೆಯುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರನ್ನು ನಿಯೋಜಿಸಬೇಕೆಂದು ಸಲಹೆ ನೀಡಿದರು.


ಬಸವಲಿಂಗಪ್ಪ ನಗರದ ಯಜಮಾನ್ ಶಿವಲಿಂಗಯ್ಯ ಮಾತನಾಡಿ, ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಮೂರು ತಿಂಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಇಡೀ ಪಟ್ಟಣಕ್ಕೆ ಸ್ವಚ್ಛತೆ ಮತ್ತು ನೀರಿನ ನಿರ್ವಹಣೆಯಲ್ಲಿ ನಮಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಘಟ್ಟ ಹೋಗುವ ವೇಳೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ, ಸರಿಪಡಿಸಬೇಕೆಂದು ಮನವಿ ಮಾಡಿದರು.


ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಅಶೋಕನಗರದ ದಲಿತ ಕಾಲನಿಗೆ 50 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಾರಿಯಾದರೂ ಅದನ್ನು ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಮುಖಂಡ ಪುಟ್ಟರಾಜು ಮಾತನಾಡಿ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು, ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


ತಹಸೀಲ್ದಾರ್ ಲೋಕೇಶ್ ಮಾತನಾಡಿ, ಪಟ್ಟಣದ ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ 1.40 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಇಂದು ಮುಗಿಯುತ್ತಿದೆ. ಜತೆಗೆ 35 ಲಕ್ಷ ರೂ. ವೆಚ್ಚದಲ್ಲಿ ಬೀದಿ ದೀಪ ದುರಸ್ತಿ ಪಡಿಸಲಾಗುವುದು. ಅನಂತರಾಮ್ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಫೆ.17ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಫೆ.20ರಂದು ದಂಡಿನ ಮಾರಮ್ಮ ಫೆ.23 ಮತ್ತು 24ರಂದು ಪಟ್ಟಲದಮ್ಮನ ಸಿಡಿ ಹಬ್ಬವನ್ನು ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ನಿಯಮಾನುಸಾರ ಆಚರಿಸಲು, ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯರು ಯುವಕರಿಗೆ ತಿಳಿವಳಿಕೆ ಹೇಳಬೇಕು ಎಂದರು.


ಸಿಡಿ ಹಬ್ಬದ ವಿಶೇಷ ಆಕರ್ಷಣೆಯಾಗಿರುವ ವಿವಿಧ ಕೋಮಿನ ಘಟಗಳ ಮೆರವಣಿಗೆ ನಿಗದಿತ ಸಮಯದಲ್ಲೇ ಸಾಗಲಿದೆ. ಹಬ್ಬದ ದಿನಗಳಲ್ಲಿ ವಿದ್ಯುತ್, ಕುಡಿಯುವ ನೀರು ಪುರೈಕೆ ಸೇರಿದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ವಿಜೃಂಭಣೆಯ ಸಿಡಿ ಹಬ್ಬ ಆಚರಣೆಗಾಗಿ ಯಾವುದೇ ಅಪಸ್ವರ ತೆಗೆಯದೆ ಎಲ್ಲ ಕೋಮಿನವರು ಸಹಕರಿಸುಂತೆ ಮನವಿ ಮಾಡಿದರು.


ತಾಪಂ ಇಒ ಮಮತಾ, ಡಿವೈಎಸ್‌ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಪಿಐ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಟಿಎಚ್‌ಒ ವೀರಭದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಎಚ್.ಕೆಂಪಯ್ಯ, ಚಿಕ್ಕರಾಜು, ಸದಸ್ಯರಾದ ಪ್ರಶಾಂತ, ಬಸವರಾಜು, ಸಿದ್ದರಾಜು, ರಾಜಶೇಖರ, ಯಜಮಾನ್ ಎಂ.ಸಿ.ವೀರೇಗೌಡ, ಪ್ರಭು ಹಾಗೂ ಮಲ್ಲಣ್ಣ, ಗಡಿ ಯಜಮಾನರು ಹಾಗೂ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net