

ಹಾಸನ: ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅತ್ಯಂತ ಸಡಗರ, ಸಂತೋಷದಿಂದ ಆಚರಿಸುತ್ತಿದ್ದೇವೆ. ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರಿಗೆ ಸುಗಮ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಸಾಮಾನ್ಯ ದರ್ಶನಕ್ಕೆ ಒಂದು ಸರದಿ, ಟಿಕೆಟ್ ಖರೀದಿಸಿ ಬರುವವರಿಗೆ ಪತ್ಯೇಕ ಸರದಿ, ಶಿಷ್ಟಾಚಾರಕ್ಕೆ ಬೇರೆ ಸರದಿ ಮಾಡಲಾಗಿದೆ. ಗೋಲ್ಡ್ ಕಾರ್ಡ್‌ಗೆ ಸಮಯ ನೀಡಲಾಗಿದೆ. ಬೆಳಗ್ಗೆ 10.30 ರಿಂದ 12.30ರವರೆಗೆ ವಿಐಪಿಗಳಿಗೆ ಮಾತ್ರ ದರ್ಶನವಿರುತ್ತದೆ. ಐದರಿಂದ, ಆರು ಗಣ್ಯರಿಗೆ ಮಾತ್ರ ಶಿಷ್ಟಾಚಾರ ಅನ್ವಯವಾಗುತ್ತದೆ. ಗೋಲ್ಡ್ ಕಾರ್ಡ್ ಪಡೆದು ಬರುವವರರಿಗೆ ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ. ಉಳಿದ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನ ಇರುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. 120 ಶೌಚಗೃಹಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳ ನಿರ್ವಹಣೆಗೆ ಒಬ್ಬ ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಒಳಗೊಂಡಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಸುತ್ತ ಪಾದರಕ್ಷೆಗಳನ್ನು ಬಿಡುವಂತಿಲ್ಲ. ಸಾರಿಗೆ, ರೈಲ್ವೆ ನಿಲ್ದಾಣಗಳಲ್ಲಿ ಸೇರಿದಂತೆ ಹಲವೆಡೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಬುಕ್ಕಿಂಗ್, ವಾಟ್ಸ್‌ಆ್ಯಪ್ ಚಾಟ್‌ಬಾಟ್ ಪರಿಚಯಿಸಲಾಗಿದೆ. ಎಐ ಟೆಕ್ನಾಲಜಿ ಮೂಲಕ ದೇವಿ ದರ್ಶನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.
ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹನ್ನೆರಡು ಟೂರ್ ಪ್ಯಾಕೇಜ್ ಮಾಡಲಾಗಿದೆ. ಶಿಷ್ಟಾಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ವಿಐಪಿಗಳ ಜತೆ ಬರುವವರಿಗೆ ನಂಬರ್‌ಗಳನ್ನು ನಿಗದಿ ಮಾಡಲಾಗಿದೆ. ವಿವಿಐಪಿಗಳು ಜತೆಯಲ್ಲಿ ನಾಲ್ಕು ಜನರನ್ನು ಕರೆದುಕೊಂಡು ಬರಬಹುದು. ಸಚಿವರು, ವಿಐಪಿಗಳು ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಹೋಗಬೇಕು. ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದರು.