

ಕೆ.ಆರ್.ನಗರ: ನಾವು ಒಕ್ಕಲಿಗ ಸಮುದಾಯದವರು ಎನ್ನುವ ನೀವು, ಇಲ್ಲಿವರೆಗೆ ಸಮುದಾಯದ ಯಾವುದೇ ಕಾರ್ಯಕರ್ತನನ್ನು ಬೆಳೆಸಲು ಮುಂದಾಗಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬದ ಉದ್ಧಾರಕ್ಕಾಗಿ ಮಾತ್ರ ಶ್ರಮಿಸುತ್ತಿರುವ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ಯಾರನ್ನೂ ಬೆಳೆಸುತ್ತಿಲ್ಲ. ಕೇವಲ 2 ಸೀಟಿಗಾಗಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆ ಸೀಟುಗಳನ್ನು ಯಾರು ಎಲ್ಲಿ ನಿಲ್ಲಬೇಕೆಂಬುದನ್ನು ಬಿಜೆಪಿಯವರೇ ತೀರ್ಮಾನಿಸಿದ್ದಾರೆ. ಮೂರು ಕ್ಷೇತ್ರದಲ್ಲೂ ಅಳಿಯ, ಮಗ, ಮೊಮ್ಮಗನಿಗೆ ಆಗಬೇಕೇ ಎಂದು ವ್ಯಂಗ್ಯವಾಡಿದರು.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಮಗೆ ಅಧಿಕಾರ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಸರ್ಕಾರ ಉಳಿಯಲು ಬಹಳ ಪ್ರಯತ್ನಿಸಿದರೂ ಅವರನ್ನು ಜರಿಯುತ್ತಿದ್ದೀರಿ. ಇದ್ಯಾವುದನ್ನು ಒಕ್ಕಲಿಗರು ಮರೆತಿಲ್ಲ. ಸಮುದಾಯ ಅವರ ಬೆನ್ನಿಗೆ ನಿಂತಿದ್ದು. ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 15 ಜನ ಒಕ್ಕಲಿಗರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಕೊಡಿಸಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ಕೊಟ್ಟ ವಚನದಂತೆ ಜಾರಿ ಮಾಡಿದ ಬಡವರು ಮತ್ತು ಮಹಿಳೆಯರಿಗೆ ಅನುಕೂಲವಾಗಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯ ಪ್ರಧಾನ ಮಂತ್ರಿಯಿಂದ ಹಿಡಿದು ಮತ್ತು ಜೆಡಿಎಸ್ ಮುಖಂಡರವರೆಗೂ ವಿರೋಧ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶ್ರೀಮಂತರ 26 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿ ಬಡವರ ವಿರೋಧಿಯಾಗಿದೆ ಎಂದರು.
ಕೇಂದ್ರ ಸರ್ಕಾರ ಜಿಎಸ್‌ಟಿಯ ರಾಜ್ಯದ ಪಾಲನ್ನು ಕೂಡದೆ, ಬರ ಪರಿಹಾರ ನಿಧಿಯನ್ನು ಕೊಡದೆ ರೈತರಿಗೆ ಅನ್ಯಾಯವ್ಯಸಗುತ್ತಿದೆ. ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಒಬ್ಬ ಮಹಿಳೆಗೆ ಒಂದು ವರ್ಷಕ್ಕೆ 1 ಲಕ್ಷ ರೂ.ಗಳನ್ನು ನೀಡುವ ಗ್ಯಾರಂಟಿ ಯೋಜನೆ ಸೇರಿ 25 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವ ಬಿಜೆಪಿಯವರು ಶೇ.84 ರಷ್ಟು ಇರುವ ಸಮಾಜಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಒಕ್ಕಲಿಗ ಸಮುದಾಯ ಇಲ್ಲಿಯವರೆಗೆ ಯಾರನ್ನು ಬೆಂಬಲಿಸಿದ್ದಾರೋ ಅವರೇ ಚುನಾಯಿತರಾಗಿದ್ದಾರೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನೆ ಮಗನೆಂದು ಹೆಚ್ಚು ಮತ ನೀಡಿದ್ದೀರಿ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೆ ನೀಡಿದ ಮತಕ್ಕಿಂತ ಸ್ಟಾರ್ ಚಂದ್ರು ಅವರಿಗೆ ಹೆಚ್ಚು ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸೋಣ ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮಾತನಾಡಿ, ನಾನು ನಿಮ್ಮ ಸೇವೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಸೇವೆಗೆ ಬಂದಿದ್ದೇನೆಯೇ ಹೊರತು ದುಡ್ಡು ಮಾಡುವುದಕ್ಕಲ್ಲ. ಆದ್ದರಿಂದ ನನಗೆ ಮತ ನೀಡಿ ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಶಾಸಕ ದಿನೇಶ್ ಗೂಳಿಗೌಡ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಾಜಿ ಸದಸ್ಯ ಎಸ್.ಪಿ.ತಮ್ಮಯ್ಯ, ಪುರಸಭಾ ಸದಸ್ಯ ಕೆ.ಜಿ.ಸುಬ್ರಮಣ್ಯ, ತಾಪಂ ಮಾಜಿ ಅಧ್ಯಕ್ಷ ಬೋರೆ ನಾಗರಾಜ್, ಮಾಜಿ ಸದಸ್ಯರಾದ ಗೋವಿಂದೇಗೌಡ, ಡಿ.ನಟರಾಜ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಒಕ್ಕಲಿಗ ಸಂಘದ ಉಪಾಧ್ಯಕ್ಷ ಪರಶುರಾಮ, ಮುಖಂಡರಾದ ಸಂದೇಶ್, ಜಯಂತ್, ಉದಯಶಂಕರ್, ಎಂ.ಎಸ್.ಮಹದೇವ್, ಎಂ.ಜೆ.ರಮೇಶ್, ಸೈಯದ್ ಜಾಬೀರ್ ಇನ್ನಿತರರು ಹಾಜರಿದ್ದರು.