ಕುಟುಂಬ ನಾಶ ಮಾಡುವಲ್ಲಿ ಮದ್ಯಪಾನ ಮೇಲುಗೈ

ಕುಟುಂಬ ನಾಶ ಮಾಡುವಲ್ಲಿ ಮದ್ಯಪಾನ ಮೇಲುಗೈ
Published on

ಕಿಕ್ಕೇರಿ: ಕುಟುಂಬಗಳನ್ನು ನಾಶ ಮಾಡುವ ಚಟದಲ್ಲಿ ಮದ್ಯಪಾನ ಕೂಡ ಒಂದಾಗಿದ್ದು, ದುಶ್ಚಟದಿಂದ ಮುಕ್ತವಾಗಿರಲು ಸಾರ್ವಜನಿಕರು ಮುಂದಾಗಬೇಕು ಎಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.

ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕು ಜ್ಞಾನವಿಕಾಸ ಕೇಂದ್ರದ ಮೂಲಕ ಭಾನುವಾರ ಹಮ್ಮಿಕೊಂಡಿದ್ದ ಮದ್ಯಪಾನದ ಕೆಡುಕು ಹಾಗೂ ನೀರು ಸದ್ಭಳಕೆ ಕುರಿತು ಬೀದಿನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಮಿ ಬಗೆದು ನೀರು ತೆಗೆಯುವ ಬದಲು ನೀರು ಮಗೆಯುವ ಕೆಲಸವಾಗಬೇಕು. ಕೊಳವೆ ಬಾವಿಗಳ ಮೂಲಕ ಭೂಮಿ ಕೊರೆದು ನೀರು ಬಸಿಯುವುದನ್ನು ಮಾಡುತ್ತ ಸಾಗಿದರೆ ಕೆಲವೇ ವರ್ಷಗಳಲ್ಲಿ ಅಂತರ್ಜಲ ಬರಿದಾಗಲಿದೆ. ಜಲಕ್ಷಾಮ ಉದ್ಭವಿಸಿ, ಆಹಾರ ಸರಪಳಿ ಕುಸಿಯಲಿದೆ. ಬದುಕು, ಉಳಿವಿಗಾಗಿ ಹೋರಾಡಬೇಕಾದೀತು ಎಂದು ಎಚ್ಚರಿಸಿದರು.
ಅಂತರ್ಜಲ ವೃದ್ಧಿಸಲು, ಕೆರೆಕಟ್ಟೆಗಳಿಗೆ ನೀರು ಹರಿಯುವ ಮೂಲವನ್ನು ತೆರವು ಮಾಡಿ. ಕಡ್ಡಾಯವಾಗಿ ಇಂಗುಗುಂಡಿ ನಿರ್ಮಿಸಿ, ಮಳೆಯ ನೀರು ಪೋಲಾಗದೆ ಭೂಮಿಯೊಳಗೆ ಸೇರಿಸುವ ಕೆಲಸ ಮಾಡಿ ಸಂಸ್ಥೆ ಕೆರೆಕಟ್ಟೆ ಉಳಿಸಲು ಯೋಜನೆ ರೂಪಿಸಿ, ಹಂತ ಹಂತವಾಗಿ ಹೂಳು ತೆಗೆದು ಕೆರೆ ತುಂಬಿಸುವ ಕೆಲಸ ಮಾಡುತ್ತಿದೆ. ಜ್ಞಾನವಿಕಾಸ ಕೇಂದ್ರ ರೂಪಿಸಿ ಸದಸ್ಯರಿಂದಲೇ ಸಮುದಾಯ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಕುಡಿತ ದುಶ್ಚಟಗಳಲ್ಲಿ ರಾಜ. ಕುಡಿತದಿಂದ ವೈಯಕ್ತಿಕ ಆರೋಗ್ಯ ನಾಶವಾಗುವುದರ ಜತೆಗೆ ನಂಬಿದ ಕುಟುಂಬ ಬೀದಿಪಾಲಾಗಲಿದೆ ಕುಡಿತದಿಂದ ಹೊರ ಬರಬೇಕು ಎಂದರು.
ಸ್ನೇಹಜೀವಿ ಕಲಾತಂಡ ಸಂಸ್ಥೆ ರೂಪಿಸಿರುವ ಪ್ರಗತಿನಿಧಿ ಯೋಜನೆ, ಜ್ಞಾನವಿಕಾಸ ಯೂಟ್ಯೂಬ್ ವಾಹಿನಿ, ಮದ್ಯವರ್ಜನ ಶಿಬಿರ, ನೀರಿನ ಸದ್ಭಳಕೆ, ಸಿಎಸ್‌ಸಿ ಕೇಂದ್ರಗಳಿಂದ ಸಿಗುವ ಸೌಲಭ್ಯ ಕುರಿತು ನಾಟಕದ ಮೂಲಕ ಪ್ರದರ್ಶನ ನೀಡಿ ಅರಿವು ಮೂಡಿಸಿದರು.

ತಾ. ಯೋಜನಾಧಿಕಾರಿ ಎಂ.ವೀರೇಶಪ್ಪ, ಮೇಲ್ವಿಚಾರಕಿ ರೇಣುಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾದಲಾಂಬಿಕಾ, ಸೇವಾ ಪ್ರತಿನಿಧಿ ಮಂಗಳಾ, ಗ್ರಾಮ ಮುಖಂಡ ಕುಮಾರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net