ಅಮಾನತ್ತುಗೊoಡ ಟಿಎಚ್‌ಒ ಡಾ.ಅಂಬೂರೆ ಮರಳಿ ಕರ್ತವ್ಯಕ್ಕೆ

Doctors
Published on

ಆಳಂದ ಇಬ್ಬರು ತಾಲೂಕು ವೈದ್ಯಾಧಿಕಾರಿಗಳು | ಸಿಬ್ಬಂದಿಗೆ ಎರಡು ತಿಂಗಳಿ0ದ ಸಂಬಳವಿಲ್ಲ

ಆಳಂದ : ಅಮಾನತ್ತುಗೊಂಡಿದ್ದ ಟಿಎಚ್‌ಒ ಒಬ್ಬರು ಕೆಎಟಿ ತಡೆಯಾಜ್ಞೆ ತಂದು ಮರಳಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರಿoದ ಆಳಂದ ತಾಲೂಕು ವೈದ್ಯಾಧಿಕಾರಿಗಳಾಗಿ ಇಬ್ಬರು ಕಾರ್ಯನಿರ್ವಹಿಸುವಂತ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಬಯಲಿಗೆ ಬಂದಿದೆ.

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ.ಸುಶೀಲಕುಮಾರ ಅಂಬೂರೆ ಎಂಬುವರನ್ನು ಇಲಾಖೆ ಆಯುಕ್ತರು ಅಮಾನತ್ತುಗೊಳಿಸಿದ್ದರು. ಹೀಗಾಗಿ ಅವರೇ ಡಾ.ಮಹಾಂತಪ್ಪ ಹಾಳಮಳ್ಳಿ ಅವರಿಗೆ ಟಿಎಚ್‌ಒ ಅಧಿಕಾರವನ್ನು ವಹಿಸಿಕೊಟ್ಟಿದ್ದರು. ನಂತರ ಕೆಎಟಿಗೆ ಮೊರೆ ಹೋದಾಗ ನ.೨೨ ರಂದು ತಡೆಯಾಜ್ಞೆ ನೀಡಿದೆ. ಅದರ ಬೆನ್ನಲ್ಲಿಯೇ ಮರಳಿ ಬಂದ ಡಾ.ಅಂಬೂರೆ ಅಧಿಕಾರ ವಹಿಸಿಕೊಂಡು ಡಿಎಚ್‌ಒ ಅವರಿಗೆ ವರದಿ ಮಾಡಿದ್ದಾರೆ.

ತಡೆಯಾಜ್ಞೆ ನೀಡಿರುವ ಮಾಹಿತಿ ಮೇಲಧಿಕಾರಿಗಳಿಗೆ ನೀಡಿ, ಅನುಮತಿ ಪಡೆದುಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಆದರೆ,ಇದ್ಯಾವುದನ್ನು ಮಾಡಿಲ್ಲದ ಕಾರಣ ಈಗ ಇಬ್ಬರು ತಾಲೂಕು ವೈದ್ಯಾಧಿಕಾರಿಗಳಿರುವಂತಾಗಿದೆ. ಸರ್ಕಾರಿ ಕಾರ್ಯಕ್ರಮ ಇನ್ನಿತರ ಕಡೆಗೆ ಅಂಬೂರೆ ಅವರು ಹಾಜರಾಗುವ ಮೂಲಕ ತಾವೆ ತಾಲೂಕು ವೈದ್ಯಾಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಕಚೇರಿಯ ಆಡಳಿತಾತ್ಮಕ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಯಾರನ್ನು ಟಿಎಚ್‌ಒ ಎಂದು ಕರೆಯಬೇಕು ಎಂದು ಸಿಬ್ಭಂದಿ ಗೊಂದಲಕ್ಕೆ ಸಿಲುಕಿದ್ದಾರೆ.

ಮೇಲಧಿಕಾರಿಗಳ ಅನುಮತಿ ಪಡೆದುಕೊಳ್ಳದೆ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಕಚೇರಿ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಈಗಾಗಲೇ ಅವರ ವಿರುದ್ಧ ಇಲಾಖೆಯ ಹಣ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪಗಳಿವೆ. ಹೀಗಾಗಿ ಮತ್ತೇನು ಆಗಲಿದೆ ಎಂಬ ಕಳವಳ ಎಲ್ಲರನ್ನು ಕಾಡುತ್ತಿದೆ. ಈ ಗೊಂದಲದಿAದಾಗಿ ಕಳೆದ ಎರಡು ತಿಂಗಳಿAದ ಸಿಬ್ಬಂದಿಗೆ ಸಂಬಳ ಸಹ ಆಗಿಲ್ಲ ಎಂದು ಗೋಳಾಡುತ್ತಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆಗೆ ಪರಿಹಾರ ಮಾಡುವ ಕೆಲಸ ಮಾಡಬೇಕಾಗಿದೆ.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net