ಬೆಳ್ತಂಗಡಿ: ಗಣಪತಿ ಸಾನ್ನಿಧ್ಯವುಳ್ಳ ಕಾರಣಿಕ ಕ್ಷೇತ್ರ ತಾಲೂಕಿನ ಎರಡನೇ ದೇವಸ್ಥಾನವಾದ ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಎರಡನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿ ನಡೆಯಿತು.
ಪೊಳಲಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ತಂತ್ರಿವರ್ಯತ್ವದಲ್ಲಿ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಉಪಸ್ಥಿತಿಯಲ್ಲಿ ಮಹಾಗಣಪತಿಗೆ 12 ತೆಂಗಿನಕಾಯಿ ಗಣಪತಿ ಹವನ, 25 ಕಲಶಾಭಿಷೇಕ, ಹವನ, ಪ್ರಸನ್ನ ಪೂಜೆ, ಅಪ್ಪ, ಪಂಚಕಜ್ಜಾಯ, ಮಹಾಮಂಗಳಾರತಿ ಸೇವೆಗಳು ನಡೆದವು. ಸಂಜೆ ರಂಗ ಪೂಜೆ ಬಳಿಕ ದೇವರ ಬಲಿ ಉತ್ಸವ ನೆರವೇರಿತು.
ಶ್ರೀ ಸೋಮನಾಥೇಶ್ವರೀ ದೇವಿಗೆ ಜನವರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶ್ರೀ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಹೊಂದಿದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಎರಡು ವಷರ್ಗಳ ಹಿಂದೆ ಅವರ ಇಚ್ಛೆಯಂತೆ ಗಣಪತಿ ದೇವರ ಆಕರ್ಷಕ ನೂತನ ಮೂರ್ತಿಯನ್ನು ಸಿದ್ಧಪಡಿಸಿ ಪ್ರತಿಷ್ಠಾಪಿಸಲಾಗಿತ್ತು.
ಅರ್ಚಕ ಪ್ರವೀಣ ಮಯ್ಯ, ಪ್ರಕಾಶ ಹೊಳ್ಳ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಆಡಳಿತಾಧಿಕಾರಿ ಅಳದಂಗಡಿಯ ಪಶುವೈದ್ಯ ಪರಿವೀಕ್ಷಕ ರಮೇಶ್ ಉಪಸ್ಥಿತರಿದ್ದರು.