ಅಕ್ಷಯ ತೃತೀಯಾ: ಚಿನ್ನದ ನಾಣ್ಯಗಳಿಗೆ ಹೆಚ್ಚಿದ ಬೇಡಿಕೆ

Akshaya
Published on

ಪಂಕಜ ಕೆ.ಎಂ.

ಬೆಂಗಳೂರು: ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಗ್ರಾಂ ಲೆಕ್ಕದಲ್ಲಿ ಸಣ್ಣಪುಟ್ಟ ಆಭರಣಗಳನ್ನು ಖರೀದಿಸುತ್ತಾರೆ. ಆದರೆ ಶ್ರೀಮಂತರು ಚಿನ್ನದ ನಾಣ್ಯಗಳನ್ನು ಕೊಳ್ಳುತ್ತಾರೆ. ಇದು ಸಹ ಹೂಡಿಕೆಗೆ ಸಮಾನ. ಅಗತ್ಯವಿದ್ದಾಗ ನಾಣ್ಯಗಳನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳಬಹುದು. ಹಾಗಾಗಿ ಅಕ್ಷಯ ತೃತೀಯ (ಮೇ 10) ಹಿನ್ನೆಲೆ ಆಭರಣ ಮಳಿಗೆಗಳು 1 ಗ್ರಾಂ, 5 ಗ್ರಾಂ, 10 ಗ್ರಾಂ ಹಾಗೂ ಅದಕ್ಕೂ ಹೆಚ್ಚಿನ ತೂಕದ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ನ ಚಿನ್ನದ ನಾಣ್ಯಗಳನ್ನು ಸಿದ್ಧಪಡಿಸಿಟ್ಟುಕೊಂಡಿವೆ. ಜೊತೆಗೆ ಗ್ರಾಹಕರನ್ನು ಸೆಳೆಯಲು ಆಕರ್ಷಕ ವಿನ್ಯಾಸಗಳ ಆಭರಣಗಳೊಂದಿಗೆ ಸಜ್ಜಾಗಿವೆ.

ರಷ್ಯಾ- ಉಕ್ರೇನ್ ಯುದ್ಧದ ನಂತರ ಐರೋಪ್ಯ ರಾಷ್ಟ್ರಗಳು ಹಾಗೂ ಉತ್ತರ ಏಷ್ಯಾದಲ್ಲಿ ಅಸ್ಥಿರತೆ ವಾತಾವರಣ ನಿರ್ಮಾಣವಾಗಿದ್ದು, ಬಹಳಷ್ಟು ಉದ್ಯಮಗಳು ನಶಿಸಿವೆ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದವರೆಲ್ಲ ಸುರಕ್ಷತೆ ಮತ್ತು ಲಾಭದ ದೃಷ್ಟಿಯಿಂದ ಚಿನ್ನ ಖರೀದಿಯತ್ತ ಒಲವು ತೋರುತ್ತಿದ್ದಾರೆ. ಇದರಿಂದಾಗಿ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ.

ಆಕರ್ಷಕ ಕೊಡುಗೆಗಳು: ಹೇಳಿ ಕೇಳಿ ಈಗ ಮದುವೆ ಸೀಸನ್. ಹೆಚ್ಚಿನ ಪ್ರಮಾಣದಲ್ಲಿ ಆಗದಿದ್ದರೂ, ಅಲ್ಪ ಪ್ರಮಾಣದಲ್ಲಿಯಾದರೂ ಜನರು ಆಭರಣ ಖರೀದಿಸುತ್ತಾರೆ. ಹೀಗಾಗಿ ಮಳಿಗೆಗಳು ಗ್ರಾಹಕರನ್ನು ಸೆಳೆಯಲು ಹೆಚ್ಚು ಖರೀದಿಗೆ ರಿಯಾಯಿತಿ, ಉಚಿತ ಚಿನ್ನ ಅಥವಾ ಬೆಳ್ಳಿ, ಮೇಕಿಂಗ್ ಚಾರ್ಜ್‌ನಿಂದ ವಿನಾಯಿತಿಯಂತಹ ಕೊಡುಗೆಗಳನ್ನು ಪ್ರಕಟಿಸಿವೆ. ಹೀಗಾಗಿ ಚಿನ್ನದ ದರ ಹೆಚ್ಚಳದ ನಡುವೆಯೂ ಇದರಿಂದ ಕಳೆದ ವರ್ಷಕ್ಕಿಂತ ಶೇ.20 ಅಧಿಕ ಆಭರಣ ಖರೀದಿಯಾಗುವ ನಿರೀಕ್ಷೆ ಇದೆ.

ಬಾಲರಾಮನ ಬೆಳ್ಳಿ ವಿಗ್ರಹ ಉಡುಗೊರೆ: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಈ ಬಾರಿ ಅಕ್ಷಯ ತೃತೀಯದಿಂದ ಅಯೋಧ್ಯೆಯಲ್ಲಿನ ಬಾಲರಾಮನ ವಿನ್ಯಾಸದ ಬೆಳ್ಳಿ ವಿಗ್ರಹಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. 50 ಸಾವಿರ ರೂ. ಮೇಲ್ಪಟ್ಟು ಆಭರಣ ಖರೀದಿ ಮಾಡುವವರಿಗೆ ಬಾಲರಾಮನ ವಿಗ್ರಹ ಉಡುಗೊರೆ ನೀಡಲಿದೆ. ಇದಕ್ಕಾಗಿ ಅಯೋಧ್ಯೆಯ ದೇಗುಲದಲ್ಲಿ ಈ ವಿಗ್ರಹಗಳನ್ನು ಇಟ್ಟು, ಅಭಿಷೇಕ ಹಾಗೂ ಪೂಜೆ ಮಾಡಿಸಿ ತಂದು ಅಕ್ಷತೆಯೊಂದಿಗೆ ಗ್ರಾಹಕರಿಗೆ ನೀಡಲಾಗುವುದು ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕರೂ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಟಿ.ಎ. ಶರವಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net