

ಲಕ್ಷ್ಮೇಶ್ವರ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ದಿನವನ್ನು ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಆಶ್ರಯದಲ್ಲಿ ಶುಕ್ರವಾರ ಆಚರಿಸಲಾಯಿತು.
ಸಿಆರ್ಪಿ ಸತೀಶ ಬೋಮಲೆ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಸಾವಿತ್ರಿಬಾಯಿ ಪುಲೆಯವರು ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿದ್ದ ನೋವು, ಅವಮಾನಗಳನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ಅಕ್ಷರದವ್ವ ಎನ್ನುವ ಹೆಸರು ಪಡೆದರು ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯ ಬಸವರಾಜ ಕುಂಬಾರ ಮಾತನಾಡಿ, ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ, ಜ್ಯೋತಿಬಾ ಪುಲೆ ಹಾಗೂ ಇವರ ಜತೆಗೆ ಸಾವಿತ್ರಿಬಾಯಿ ಪುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ ಎಂದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸೋಮಣ್ಣ ಯತ್ತಿನಹಳ್ಳಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಸಾವಿತ್ರಿಬಾಯಿ ಫುಲೆಯವರಿಗೆ ಹೆಚ್ಚು ಅರ್ಥಪೂರ್ಣವಾಗಿ ಅನ್ವಯಿಸುತ್ತದೆ ಎಂದು ಹೇಳಿದರು. ಶಿಕ್ಷಕಿಯರಾದ ಎಚ್.ಡಿ. ನಿಂಗರೆಡ್ಡಿ ಮಾತನಾಡಿದರು ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಅಧ್ಯಕ್ಷ ಕರಿಯಪ್ಪ ಶಿರಹಟ್ಟಿ, ಮುಖಂಡರಾದ ಗಾಳೆಪ್ಪ ದೊಡ್ಡಮನಿ, ಶಿಕ್ಷಕರಾದ ಆರ್.ಎಂ.ಶಿರಹಟ್ಟಿ, ಎಲ್.ಎ. ಬಣಕಾರ, ಅಕ್ಷತಾ ಕಾಟಿಗರ, ಆರ್.ಕೆ. ಉಪನಾಳ ಹಾಗೂ ಎನ್ಟಿಸಿಯ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು