

ರಾಮನಗರ
ನಗರದ ವಿಜಯನಗರ ಶಾಲೆಯಲ್ಲಿ ಶಿಕ್ಷಕ ಸಂಟನೆಯ ಖಾಸಗಿ ಕಾರ್ಯಕ್ರಮಕ್ಕೆ ಅಕ್ಷರ ದಾಸೋಹದ ಅಡುಗೆ ಪರಿಕರ, ಶಾಲಾ ಜಾಗವನ್ನು ನಿಯಮ ಬಾಹಿರವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ರಾಜಶೇಖರಯ್ಯ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜಯನಗರದ ಮುಖ್ಯಶಿಕ್ಷಕ ವೀರಭದ್ರಯ್ಯ ಅವರ ತಾಲೂಕು ಶಿಕ್ಷಕರ ಸಂದ ಅಧ್ಯಕ್ಷರ ಪದಗ್ರಹಣ ಸಮಾರಂಭ ಗುರುಭವನದಲ್ಲಿ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಶಿಕ್ಷಕರಿಗೆ ಶಾವಿಗೆ ಬಾತ್ ಅನ್ನು ಶಿಕ್ಷಕರು ಕಾರ್ಯನಿರ್ವಹಿಸುವ ಶಾಲೆಯ ಬಿಸಿಯೂಟ ಸಿಬ್ಬಂದಿಯಿಂದ ಮಾಡಿಸಿದ್ದರು. ಮಕ್ಕಳ ಅಕ್ಷರ ದಾಸೋಹದ ಅಡುಗೆ ಪರಿಕರ, ಗ್ಯಾಸ್, ಪಾತ್ರೆ, ಜಾಗ, ಇನ್ನಿತರ ಸಾಮಾನುಗಳನ್ನು ಖಾಸಗಿ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿ, ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿ ರಾಜಶೇಖರಯ್ಯ, ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಎ.ಡಿ.ಸಂತೋಷ್ ಸ್ಥಳ ಪರಿಶೀಲನೆ ನಡೆಸಿದರು.
ಶಿಕ್ಷಣಾಧಿಕಾರಿ ರಾಜಶೇಖರಯ್ಯ ಮಾತನಾಡಿ, ಕಾರ್ಯಕ್ರಮದ ಬಿಸಿಯೂಟದ ಯಾವುದೇ ಪದಾರ್ಥ ಬಳಸಿಲ್ಲ. ಗ್ಯಾಸ್, ಅಡುಗೆ ಪದಾರ್ಥಗಳನ್ನು ನಾವು ಹೊರಗಡೆಯಿಂದ ತಂದು ಶಾವಿಗೆ ಉಪ್ಪಿಟ್ಟು ಮಾಡಿಸಿ ಕೊಟ್ಟಿದ್ದೇವೆ ಎಂದು ಎಸ್ಡಿಎಂಸಿ ಅಧ್ಯಕ್ಷರು ಹೇಳಿದ್ದು, ಇಲಾಖೆಯು ಸಹ ರವೆ, ಶಾವಿಗೆ ಪ್ಯಾಕೆಟ್ ವಿತರಣೆ ಮಾಡುವುದಿಲ್ಲ. ಮುಂದೆ ಈ ರೀತಿ ಮಾಡಬಾರದೆಂದು ತಪ್ಪೊಪ್ಪಿಗೆ ಬರೆಸಿಕೊಳ್ಳಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಮೀಸಲಿರುವ ಜಾಗದಲ್ಲಿ ಮಕ್ಕಳ ಕಾರ್ಯಕ್ರಮಕ್ಕಲ್ಲದೆ ಬೇರೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು ತಪ್ಪು, ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಪಡೆದು, ಶಾಲೆಯ ಜಾಗವನ್ನು ಖಾಸಗಿ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದರೆ ಕ್ರಮ ಜರುಗಿಸಲಾಗುವುದು.
> ಸೋಮಲಿಂಗಯ್ಯ
ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ
ಶಿಕ್ಷಕ ಸಂಘಟನೆಯ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಯ ಬಿಸಿಯೂಟ ಪದಾರ್ಥ, ಅಡುಗೆ ಪರಿಕರ ಬಳಸಿಕೊಳ್ಳಲಾಗಿದೆ. ಅದರಲ್ಲೂ ಬಿಸಿಯೂಟ ನೌಕರರಿಂದ ಅಡುಗೆ ಮಾಡಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಯೇ?. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.
> ಹೆಸರು ಹೇಳಲಿಚ್ಛಿಸದ ನಾಗರಿಕರ