ಹಲವು ಐತಿಹ್ಯಕ್ಕೆ ಸಾಕ್ಷಿಯಾದ ಅಕ್ಕೂರು

akkuru1
Published on

* ಸರ್ವಧರ್ಮ ಸಹಬಾಳ್ವೆಗೆ ಸಾಕ್ಷಿ

* ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಈ ಗ್ರಾಮವೇ ಪ್ರಮುಖ ವಾಣಿಜ್ಯ ಕೇಂದ್ರ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೊಂಬೆನಾಡು ಎಂದು ವಿಶ್ವ ಪ್ರಸಿದ್ಧಿ ಪಡೆದಿರುವ ಚನ್ನಪಟ್ಟಣ ತಾಲೂಕು ತನ್ನ ಒಡಲಾಳದಲ್ಲಿ ಭವ್ಯ ಇತಿಹಾಸವನ್ನು ಹೊಂದಿದೆ. ತಾಲೂಕಿನ ಹಲವು ಗ್ರಾಮಗಳು ರಾಜಮನೆತನಗಳ ಆಳ್ವಿಕೆ ಸೇರಿ ಹಲವು ವಿಚಾರಗಳಿಂದ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಅಂತ ಗ್ರಾಮಗಳ ಸಾಲಿನಲ್ಲಿ ತಾಲೂಕಿನ ಅಕ್ಕೂರು ಗ್ರಾಮವೂ ಒಂದು.

ಹೌದು... ಅಕ್ಕೂರು ತಾಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿದೆ. ಈ ಗ್ರಾಮಕ್ಕೆ ಅಕ್ಕೂರು ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ. ಆದರೆ, ಹಿರಿಯರ ಬಾಯಲ್ಲಿ ಗ್ರಾಮದ ಹೆಸರಿನ ಬಗ್ಗೆ ಹಲವು ಕಥೆಗಳಿವೆ. ಹಕ್ಕೂರು, ಅಕ್ಕರೆಯ ಊರು, ಅಕ್ಕನೂರು, ಅಕ್ಕಿಯೂರು ಹೀಗೆ ನಾನಾ ಹೆಸರುಗಳಿಂದ ಈಗ ಅಕ್ಕೂರು ಎಂಬ ಹೆಸರಿನಿಂದ ತಾಲೂಕಿನಲ್ಲಿ ಈ ಗ್ರಾಮ ಗುರುತಿಸಿಕೊಂಡಿದೆ.

ಅಕ್ಕೂರು ಎಂಬ ಹೆಸರಿನ ಹಿಂದೆ ದೇವಿಯೊಬ್ಬಳ ಐತಿಹ್ಯದ ಕಥೆಯೂ ಇದೆ. ಗ್ರಾಮದಲ್ಲಿ ದೇವಿರಮ್ಮ ಎಂಬ ದೇವತೆ ನೆಲೆಸಿದ್ದು, ಈಕೆ ಮೊದಲಿಗೆ ಗ್ರಾಮಕ್ಕೆ ಬಂದು ನೆಲೆಸಿದ್ದಾಗ, ಅಕ್ಕಿಯಿಂದ ಅನ್ನ ಮಾಡುತ್ತಾರಂತೆ, ಆದ್ದರಿಂದ ಅಕ್ಕಿಯ ಊರು ಎಂದು ಹೆಸರು ಪಡೆಯಿತು ಎನ್ನಲಾಗುತ್ತದೆ. ಈ ಗ್ರಾಮದ ಮೇಲೆ ಮೈಸೂರು ಮಹಾರಾಜರ ಹಕೀಕತ್ತು ಇದ್ದ ಹಿನ್ನೆಲೆಯಲ್ಲಿ ಹಕ್ಕೂರು ಎಂತಲೂ, ಸಹೋದರಿ ದೇವತೆಗಳ ಪೈಕಿ ತಂಗಿ ಸಿಂಗರಾಜಪುರ ಗ್ರಾಮದಲ್ಲಿ ಅಕ್ಕ ಈ ಗ್ರಾಮದಲ್ಲಿ ನೆಲೆಸಿದ ಕಾರಣ ಅಕ್ಕನೂರು ಆಯಿತು ಎಂತಲೂ ಹಲವು ಕಥೆಗಳು ಈ ಗ್ರಾಮಕ್ಕಿವೆ.

ಒಟ್ಟಾರೆ, ಈ ಗ್ರಾಮ ಪ್ರಾಚೀನ ಹಿನ್ನೆಲೆ ಹೊಂದಿದ್ದು, ಗ್ರಾಮದ ಈಶಾನ್ಯ ಮೂಲೆಯಲ್ಲಿರುವ ಕರಿಕಲ್ಲು ಗ್ರಾಮದ ಐತಿಹ್ಯಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಹೆಸರಿನ ಹಿನ್ನೆಲೆ ಸ್ಪಷ್ಟವಾಗಿಲ್ಲ. ಆದರೆ, ನಮ್ಮ ಊರು ಅಕ್ಕರೆಯ ಊರು ಎಂಬ ಹೆಮ್ಮೆಯಿದೆ ಎನ್ನುತ್ತಾರೆ ಶಿಕ್ಷಕ ಡಾ. ಮಹೇಂದ್ರಕುಮಾರ್, ವ್ಯಂಗ್ಯ ಚಿತ್ರ ಬರಹಗಾರ ಅಕ್ಕೂರು ರಮೇಶ್, ಮುಖಂಡ ಎ.ಪಿ.ಪುಟ್ಟರಾಜು. ಸಾವಿರಕ್ಕೂ ಹೆಚ್ಚು ಕುಟುಂಬಗಳು ಹಾಗೂ 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದ ವ್ಯಾಪ್ತಿ ಸುಮಾರು 1 ಕಿಮೀ ಅಧಿಕವಾಗಿದೆ. ಬಹಳ ವರ್ಷಗಳ ಹಿಂದೆ ಬ್ರಾಹ್ಮಣ ಸಮುದಾಯ ಈ ಗ್ರಾಮದಲ್ಲಿ ಗಟ್ಟಿಯಾಗಿ ನೆಲೆಯೂರಿದ ಇತಿಹಾಸವಿದೆ. ಗ್ರಾಮಕ್ಕೆ ಮೈಸೂರು ಮಹಾರಾಜರ ಕಾಲದಲ್ಲಿ ಜಾಗೇರಿ ಗ್ರಾಮವಾಗಿ ಇಲ್ಲಿನ ಬ್ರಾಹ್ಮಣ ಕುಟುಂಬಕ್ಕೆ ಎಂಟು ಹಳ್ಳಿಗಳು ಉಮ್ಮಳಿಯಾಗಿ ಬಂದಿದ್ದವು ಎನ್ನಲಾಗಿದೆ. ಹಿಂದು ಸಮಾಜದ ಎಲ್ಲ ಸಮುದಾಯಗಳು ಈ ಗ್ರಾಮದಲ್ಲಿ ವಾಸಿಸುತ್ತಿರುವುದು ವಿಶೇಷ.

ಸವಲತ್ತುಗಳ ಕೇಂದ್ರ!

ಅಕ್ಕೂರು ಸಕಲ ಸರ್ಕಾರಿ ಸವಲತ್ತುಗಳನ್ನು ಹೊಂದಿರುವ ಗ್ರಾಮ ಎಂಬುದು ಬಹಳ ವಿಶೇಷ. ಗ್ರಾಮದಲ್ಲಿ ಬ್ಯಾಂಕ್, ಅಂಚೆ ಕಚೇರಿ, ಸರ್ಕಾರಿ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಮಾದರಿ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜು, ಆರಕ್ಷಕ ಠಾಣೆ, ವಿದ್ಯುತ್ ವಿತರಣಾ ಉಪ ಕೇಂದ್ರ ಹೀಗೆ ಹತ್ತು ಹಲವು ಸರ್ಕಾರಿ ಕ್ಷೇತ್ರದ ಸೌಲಭ್ಯ ಹೊಂದೊದೆ. ಗ್ರಾಪಂ, ತಾಪಂ ಹಾಗೂ ಜಿಪಂ ಕೇಂದ್ರವಾಗಿದೆ. ಇಡೀ ಜಿಲ್ಲೆಯಲ್ಲಿಯೇ ಸುಸಜ್ಜಿತವಾದ ಸಹಕಾರ ಸಂಘದ ಕಟ್ಟಡ (ಪಿಎಸಿಎಸ್) ಇರುವುದು ಇಲ್ಲೇ. ಕಿರು ವಾಣಿಜ್ಯ ಕೇಂದ್ರವಾಗಿರುವ ಅಕ್ಕೂರನ್ನು ಸುತ್ತಮುತ್ತಲ ಹತ್ತಾರು ಗ್ರಾಮಗಳು ಅವಲಂಬಿಸಿವೆ. ಎಲ್ಲ ಜಾತಿಜನಾಂಗಗಳು ಸಹಬಾಳ್ವೆಯ ಜೀವನ ಸಾಗಿಸುವ ಮೂಲಕ ಗ್ರಾಮವನ್ನು ನಿಜವಾಗಲೂ ಅಕ್ಕರೆಯ ಊರನಾಗಿಸಿದ್ದಾರೆ.

ದೇವತೆಗಳ ನೆಲೆವೀಡು!

ಗ್ರಾಮದೇವರಾಗಿ ಕಾಲಭೈರವೇಶ್ವರರನ್ನು ಆರಾಧಿಸಿಕೊಂಡು ಬರಲಾಗುತ್ತಿದ್ದು, ಚಾಮುಂಡೇಶ್ವರಿ, ದೇವಿರಮ್ಮ, ಚೌಡೇಶ್ವರಿ, ರಕ್ಕಸಮ್ಮ, ಕಬ್ಬಾಳಮ್ಮ, ಶನಿ ಮಹಾತ್ಮ, ವರದರಾಜಸ್ವಾಮಿ, ಶ್ರೀರಾಮ ದೇವಸ್ಥಾನ, ಹೊನ್ನರುತ್ತಮ್ಮ, ಕಾಳಿಕಾದೇವಿ ಮಠ, ದಂಡಮ್ಮ ಸೇರಿ ಹಲವು ದೇವಸ್ಥಾನಗಳು ಗ್ರಾಮದಲ್ಲಿವೆ. ಪಕ್ಕದ ಹುಣಸನಹಳ್ಳಿ ಬಿಸಿಲಮ್ಮ ಜಾತ್ರೆ ಸಮಯದಲ್ಲಿ ಬಿಸಿಲಮ್ಮ ಈ ಊರಿನಲ್ಲಿ ಉಳಿಯುತ್ತಾರೆ. ಜಾತ್ರೆಯ ಕೊಂಡದ ಮೊದಲ ಬಂಡಿ ಈ ಗ್ರಾಮದಿಂದಲೇ ಹೋಗುವುದು ವಿಶೇಷ.

ಎಲ್ಲ ಕ್ಷೇತ್ರಕ್ಕೂ ಕೊಡುಗೆ

ಸಾಮಾಜಿಕ, ಶೈಕ್ಷಣಿಕವಾಗಿ ಸೇರಿ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದು, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಚಿರಪರಿಚಿತರಾದ ದಿ ಎ. ಗುಂಡಪ್ಪನವರು ಇದೇ ಗ್ರಾಮದವರು. ಇವರು ಹೆಸರಾಂತ ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ, ಜಿಪಂ ಸದಸ್ಯರಾಗಿ, ತಾಪಂ ಅಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಪಂ ವಿರೋಧ ಪಕ್ಷದ ನಾಯಕರಾಗಿ, ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಮಾಜಿ ಸಿಎಂ ಗುಂಡೂರಾವ್ ಅವರ ಪತ್ನಿ ದಿ. ವರಲಕ್ಷ್ಮೀ ಗುಂಡೂರಾವ್ ಅವರ ತಾಯಿಯ ಊರಾಗಿದ್ದು, ಅವರು ಗ್ರಾಮದಲ್ಲಿಯೇ ವ್ಯಾಸಂಗ ಮಾಡಿದ್ದಾರೆ. ಇದಲ್ಲದೇ ಗ್ರಾಮದ ಸಿ.ಎಲ್.ಗೌಡ, ಮುನಿದಾಸೇಗೌಡರು ಸೇರಿ ಹಲವು ಗ್ರಾಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗ್ರಾಮದ ಎ.ಪಿ.ನಾಗರಾಜು, ಡಾ.ಶಿವರಾಂ, ಡಾ.ಮಹೇಂದ್ರ ಕುಮಾರ್ ಹಾಗೂ ಎ.ಪಿ. ಸ್ಮಿತಾ ಎಂಬುವವರು ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲೂ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಈ ಪೈಕಿ ಡಾ.ಶಿವರಾಂ ಪ್ರತಿಷ್ಠಿತ ಆದಿಚುಂಚನಗಿರಿ ಸಂಸ್ಥೆಯ ಸಿಇಒ ಆಗಿದ್ದಾರೆ.

ಆರಕ್ಷಕ ಠಾಣೆಗೂ ಇತಿಹಾಸ!!

ಗ್ರಾಮದಲ್ಲಿರುವ ಅಕ್ಕೂರು ಠಾಣೆ ಹಳೆಯ ಕಾಲದ್ದು ಎಂಬುದು ವಿಶೇಷ. ಈ ಗ್ರಾಮದ ದೊಡ್ಡಗುಂಡಪ್ಪ ಎಂಬುವವರು ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರು ಹಾಗೂ ಜಾಗೇರುದಾರರಾಗಿದ್ದರು. ಇವರ ಹತ್ಯೆಯೂ ಗ್ರಾಮದಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ಕೊಲೆಗಡುಕರನ್ನು ಪತ್ತೆ ಮಾಡಲು ಹಾಗೂ ಮೃತರ ಕುಟುಂಬಕ್ಕೆ ರಕ್ಷಣೆ ನೀಡಲು ಗ್ರಾಮದಲ್ಲಿ ಠಾಣೆ ತೆರೆಯಲಾಗುತ್ತದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಮೊದಲ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net