ಅಕ್ಕಡಿ ಸಾಲು ಪದ್ಧತಿ ಕಣ್ಮರೆ

13 HANUR 2
Published on

ಹನೂರು: ಮಳೆಯಾಶ್ರಿತ ಬೇಸಾಯದಲ್ಲಿ ಬಹು ಬೆಳೆಗಳನ್ನು ಬೆಳೆಯುತ್ತಿದ್ದ ಅಕ್ಕಡಿ ಸಾಲು ಪದ್ಧತಿ ಇತ್ತೀಚೆಗೆ ಮರೆಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ತಿಳಿಸಿದರು.


ತಾಲೂಕಿನ ವಡಕೆಹಳ್ಳ ಗ್ರಾಮದ ಶ್ರೀ ಮಹದೇಶ್ವರ ಸಿರಿಧಾನ್ಯ ಘಟಕದ ಆವರಣದಲ್ಲಿ ಶನಿವಾರ ಜೆಎಸ್‌ಬಿ ಪ್ರತಿಷ್ಠಾನ, ರೈತ ಸಂಘ, ಹಸಿರು ಸೇನೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಮಳೆಯಾಶ್ರಿತ ಬೇಸಾಯ ಮತ್ತು ಜೀವನೋಪಾಯ ಕುರಿತು ರೈತರಿಗೆ ಆಯೋಜಿಸಿದ್ದ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಳೆಯಾಶ್ರಿತ ಬೇಸಾಯದ ಅಕ್ಕಡಿ ಸಾಲು ಪದ್ಧತಿಯಲ್ಲಿ ಈ ಹಿಂದೆ ರಾಗಿ ಫಸಲಿನ ಜತೆಗೆ ಸಾಸಿವೆ, ಅಲಸಂದೆ, ಅವರೆ ಹಾಗೂ ಇನ್ನಿತರೆ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈ ಪದ್ಧತಿಯು ವೈಜ್ಞಾನಿಕತೆಯನ್ನು ಹೊಂದಿದ್ದು, ಫಸಲಿನ ಪ್ರತಿ ಸಸಿಯೂ ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಈ ದಿಸೆಯಲ್ಲಿ ಒಂದರ ಬೇರು ಇನ್ನೊಂದಕ್ಕೆ ಔಷಧ ಹಾಗೂ ಆಹಾರವಾಗುತ್ತದೆ. ಒಂದರ ಹೂ ಮತ್ತೊಂದಕ್ಕೆ ಪ್ರಚೋದನೆ ನೀಡುತ್ತದೆ. ಹಕ್ಕಿ-ಪಕ್ಷಿಗಳನ್ನು ಹೂ ಆಕರ್ಷಿಸುತ್ತದೆ. ಈ ಪಕ್ಷಿಗಳು ಹೊಲದಲ್ಲಿ ಅಡಗಿರುವ ಕೀಟಗಳನ್ನು ತಿನ್ನುತ್ತವೆ. ಇದರಿಂದ ಮಳೆಯಾಶ್ರಿತ ಬೆಳೆಗಳಲ್ಲಿ ಉತ್ತಮ ಇಳುವರಿ ಹೊಂದಬಹುದಾಗಿದೆ. ಆದರೆ, ಇತ್ತೀಚೆಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಬಂದ ನಂತರ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಹೆಚ್ಚಾಗಿದೆ. ಪಾರಂಪರಿಕ ಅಕ್ಕಡಿ ಸಾಲು ಪದ್ಧತಿ ಕಣ್ಮರೆಯಾಗುತ್ತಿದೆ. ಆದ್ದರಿಂದ ಈ ಪದ್ಧತಿ ಮುಂದುವರಿಸುವಂತೆ ತಿಳಿಸಿದರು.


ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿ, ರೈತರು ಕೃಷಿ ಜತೆಗೆ ಹಸು, ಎಮ್ಮೆ, ಆಡು, ಕುರಿ ಹಾಗೂ ಕೋಳಿಗಳನ್ನು ಸಾಕಬೇಕು. ಜಮೀನಿನಲ್ಲಿ ಬೆಳೆಯುವ ಕಳೆ, ಹುಲ್ಲು ಹಾಗೂ ಸೊಪ್ಪುಗಳನ್ನೇ ಆಹಾರವಾಗಿ ನೀಡಬೇಕು. ಇದರಿಂದ ಆರ್ಥಿಕವಾಗಿ ಲಾಭ ಪಡೆದು ಜೀವನೋಪಾಯಕ್ಕೆ ಸಹಕಾರಿಯಾಗುತ್ತದೆ ಎಂದರು.


ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಜೀವನೋಪಾಯಕ್ಕೆ ಕೃಷಿಯ ಜತೆಗೆ ಉಪ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಆಹಾರ ಧಾನ್ಯಗಳ ಮೌಲ್ಯೀಕರಣವಗಬೇಕು. ಆಹಾರ ಧಾನ್ಯಗಳನ್ನು ಮಾರಾಟ ಮಾಡದೆ ಅದನ್ನು ಪುಡಿ ಮಾಡಿ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಬೇಕು. ಇದು ಉತ್ತಮ ಆದಾಯಕ್ಕೆ ದಾರಿ ಮಾಡಿಕೊಡುತ್ತದೆ. ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.


ರೈತ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಕೆ.ವಿ ಮಾದೇಶ್, ಬೊಮ್ಮಯ್ಯ, ಶ್ರೀಕಾಂತ, ಪ್ರವೀಣ್, ಜಗದೀಶ, ಶಿವಮೂರ್ತಿ, ರಾಜು, ಕುಮಾರ, ರತ್ನಮ್ಮ, ಮಹೇಶ್ವರಿ, ಸಾವಿತ್ರಮ್ಮ, ಮಹೇಶ್ವರಿ, ಸುಂದ್ರಮ್ಮ, ಮಹಾದೇವಿ, ಜಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net