

ಪಡುಬಿದ್ರಿ: ಎಲ್ಲೂರು ಕೆಮುಂಡೇಲಿನ ಪಾಂಡುರಂಗ ಭಜನಾ ಮಂಡಳಿ ಷಷ್ಟೃಬ್ದ ಸಂಭ್ರಮ-2024 ನಿಮಿತ್ತದ ಅಖಂಡ ದ್ವಾದಶಾಹ ಭಜನಾ ವೈಭವಂ ಆರಂಭವಾಗಿದ್ದು, ಉಭಯ ಜಿಲ್ಲೆಗಳ ಪ್ರಸಿದ್ಧ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ ಅಹೋರಾತ್ರಿ ಭಜನೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ನಡೆಯುತ್ತಿದೆ.
ಲೋಕಕಲ್ಯಾಣಾರ್ಥ ಐಕಮತ್ಯ ಸೂಕ್ತ ಹೋಮ, ಭಾಗ್ಯಸೂಕ್ತ ಹೋಮ, ಸುಕೃತ ಹೋಮ ಮೊದಲಾದ ಯಾಗಗಳು, ಪಾಂಡುರಂಗ ದೇವರಿಗೆ ನವಕಪ್ರಧಾನ ಹಾಗೂ ದಿನಂಪ್ರತಿ ಒಂದು ಸಾವಿರಕ್ಕಿಂತಲೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ, 12 ದಿನಗಳ ಕಾಲ ಅವಿಚ್ಛಿನ್ನವಾಗಿ ನಡೆಸುವ ಸಂಕಲ್ಪದೊಂದಿಗೆ ಮುಂದುವರೆಯುತ್ತಿದೆ.
ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಪಾಂಡುರಂಗ ದೇವರ ಸನ್ನಿಧಾನಕ್ಕೆ ಆಗಮಿಸಿ ಭಜನೆ ಆಲಿಸಿ ಸುಸಂಘಟಿತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಾಲ್ಗೊಂಡ ಆಸ್ತಿಕರನ್ನು ಹರಸಿದರು. 12 ದಿನದ 288 ಗಂಟೆಗಳ ಅವಧಿಯಲ್ಲಿ 144ಕ್ಕಿಂತಲೂ ಹೆಚ್ಚು ಭಜನಾ ತಂಡಗಳು ಭಾಗವಹಿಸುತ್ತಿವೆ.