ಅಕೈ ಪದ್ಮಶಾಲಿ ವಿಚ್ಛೇದನ ಅರ್ಜಿ ಪುರಸ್ಕೃತ

Akai padmashali
Published on

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರು ವಿವಾಹ ವಿಚ್ಛೇದನ ಕೋರಿ 2020ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದ್ದು, ಸೋಮವಾರ (ಜು.22) ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ.

ಮಾಗಡಿ ತಾಲೂಕಿನ ವಿ. ವಾಸುದೇವ್ ಅವರೊಂದಿಗೆ 2017ರ ಜನವರಿಯಲ್ಲಿ ವಿವಾಹವಾಗಿದ್ದರು. 2018ರಲ್ಲಿ ಅಧಿಕೃತವಾಗಿ ವಿವಾಹ ನೋಂದಣಿ ಮಾಡಿಸಿದ್ದರು. 2019ರಲ್ಲಿ ಒಂದು ಮುದ್ದಾದ ಗಂಡು ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆದಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆಯಾಗಲಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ.

ಮೂರು ವರ್ಷಗಳ ದಾಂಪತ್ಯದಲ್ಲಿ ಒಂದು ಮಗುವನ್ನೂ ದತ್ತು ತೆಗೆದುಕೊಂಡೆವು. ನಂತರ ನಮ್ಮಲ್ಲಿ ಹೊಂದಾಣಿಕೆ ಮೂಡಲಿಲ್ಲ. ಪತಿ ವಿನಾಕಾರಣ ಜಗಳ, ಹೀಯಾಳಿಸುವುದು ಮಾಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೋಂದಿದ್ದೆ. ಇದು ಮಿತಿಮೀರಿದ್ದರಿಂದ ವಿಚ್ಛೇದನ ಪಡೆಯಲು ತೀರ್ಮಾನಿಸಿದೆ. 2020ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ.

ನ್ಯಾಯಲಯ ನನಗಾದ ನೋವನ್ನು ಪರಿಗಣಿಸಿ, ಸೋಮವಾರ ವಿಚ್ಚೇದವನ್ನು ಮಾನ್ಯ ಮಾಡಿ ತೀರ್ಪು ನೀಡಿದೆ. ಜತೆಗೆ ದತ್ತು ಪಡೆದಿದ್ದ ಐದು ವರ್ಷದ ಮಗುವನ್ನೂ ನ್ಯಾಯಾಲಯ ನನ್ನ ಸುಪರ್ದಿಗೆ ನೀಡಿದೆ. ಇದು ನನ್ನ ಜೀವನದ ಅತ್ಯಂತ ಒಳ್ಳೆಯ ದಿನ. ಇದಕ್ಕಾಗಿ ನಾನು ನ್ಯಾಯಾಲಯಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net