ದುರಸ್ತಿಯಾಗದ ಆವರಣ ಗೋಡೆ : ಅಜ್ಜಿಬೆಟ್ಟು ಸರ್ಕಾರಿ ಹಿ.ಪ್ರಾ.ಶಾಲೆ ಕಂಪೌಂಡಿನ ಕಲ್ಲುಗಳು ಉದುರಿ ಬೀಳುವ ಪರಿಸ್ಥಿತಿ

gode
ಬಿ. ಮೂಡ ಗ್ರಾಮದ ಸ.ಹಿ.ಪ್ರಾ. ಶಾಲೆಯ ಆವರಣ ಗೋಡೆಯ ಕಲ್ಲು ಕುಸಿದು ಬಿದ್ದಿರುವುದು.
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ
ಇಲ್ಲಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ. ಈ ಮಳೆಗೆ ಕಂಪೌಂಡಿನ ಉಳಿದ ಕಲ್ಲುಗಳು ಉದುರಿ ಬೀಳುವ ಪರಿಸ್ಥಿತಿ ಇದ್ದು ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಆವರಣ ಗೋಡೆ ಬಿರುಕು ಬಿಟ್ಟಿದ್ದು ಒಂದೊಂದೇ ಕಲ್ಲು ಉದುರಿ ರಸ್ತೆ ಸೇರುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಇನ್ನೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮಕ್ಕಳು ಅತ್ತಿಂದಿತ್ತ ಓಡಾಡುವ ಪರಿಸರದಲ್ಲಿ ಅಪಾಯ ಆಹ್ವಾನಿಸುವ ಎಲ್ಲ ಲಕ್ಷಣಗಳು ಗೋಚರಿಸಿದ್ದರೂ ಶಿಕ್ಷಣ ಇಲಾಖೆ ಇನ್ನೂ ಮೌನವಾಗಿರುವ ಬಗ್ಗೆ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರ ಭಾಗದಲ್ಲಿರುವಂತಹ ಸರ್ಕಾರಿ ಶಾಲೆ. ಖಾಸಗಿ ಶಾಲೆಗಳ ಪೈಪೋಟಿಯ ಮಧ್ಯೆಯೂ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಶಾಲಾಭಿವೃದ್ಧಿ ಸಮಿತಿಯೊಂದಿಗೆ ಶಿಕ್ಷಕರ ತಂಡ ಕಾರ್ಯಪ್ರವೃತ್ತವಾಗಿದ್ದು, ಮಕ್ಕಳ ಸಂಖ್ಯೆಯೂ ಏರಿಕೆಯನ್ನು ಕಾಣುತ್ತಿದೆ. ಹಿರಿಯ ವಿದ್ಯಾರ್ಥಿ ಸಂಘವೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೀಗೆ ಶಾಲೆಯಲ್ಲಿ ಎಲ್ಲ ವ್ಯವಸ್ಥೆಗಳು ಸುಧಾರಣೆ ಕಾಣುತ್ತಿದ್ದರೆ ಇತ್ತ ಶಾಲಾ ಕೌಂಪೌಂಡ್ ಕುಸಿಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ.

ಶೌಚಗೃಹ ದೂರ

ಶಾಲಾ ಶೌಚಗೃಹಕ್ಕೂ ದುರಸ್ತಿ ಭಾಗ್ಯ ಸಿಗಬೇಕಿದೆ. ಶಾಲೆಯ ಹಿಂಭಾಗದಲ್ಲಿ ಶೌಚಗೃಹ ಇದ್ದು ಮಳೆಗಾಲದಲ್ಲಿ ಶೌಚಗೃಹಕ್ಕೆ ತೆರಳಲು ವಿದ್ಯಾರ್ಥಿಗಳು ಪ್ರಯಾಸ ಪಡಬೇಕು. ಶಾಲಾ ಕಟ್ಟಡದ ಸನಿಹವೇ ಕಿರಿಯ ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ಇದ್ದರೆ ಉತ್ತಮ. ಶಾಲೆಯ ಬಿಸಿಯೂಟದ ಕೊಠಡಿಯ ಕೆಳಗಿನ ಭಾಗವೂ ಅಪಾಯಕಾರಿಯಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಕಳೆದ ವರ್ಷ ಕುಸಿದು ಬಿದ್ದಿರುವ ಕಾಂಪೌಂಡು ಈ ವರ್ಷವೂ ಮಳೆಗೆ ಕುಸಿಯುವ ಹಂತದಲ್ಲಿದೆ. ಒಂದೊಂದೇ ಕಲ್ಲು ಉದುರಿ ಕಾಂಪೌಂಡು ರಸ್ತೆಪಾಲಾಗುವ ಸಂಭವ ಇದೆ. ಶಿಕ್ಷಣ ಇಲಾಖೆಗೆ ಕಳೆದ ವರ್ಷವೇ ಕಾಂಪೌಂಡು ದುಸ್ಥಿತಿಯ ಬಗ್ಗೆ ತಿಳಿಸಿದ್ದೇವೆ. ಮಕ್ಕಳು ಬಳಸುವ ಶೌಚಗೃಹ ಕಾಂಪೌಂಡು ಬಳಿಯೇ ಇರುವುದರಿಂದ ತಕ್ಷಣ ಆವರಣ ಗೋಡೆ ದುರಸ್ತಿಯಾಗಬೇಕಿದೆ.ಲಕ್ಷ್ಮೀ, ಮುಖ್ಯಶಿಕ್ಷಕಿ, ದ.ಕ.ಜಿ.ಪ. ಸ.ಹಿ.ಪ್ರಾ.ಶಾಲೆ ಬಿ.ಮೂಡ ಶಾಲಾ ಮಕ್ಕಳ ಕಲಿಕೆ ಹಾಗೂ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹಕವಾಗಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ತರಬೇತಿಯನ್ನು ಈ ವರ್ಷ ಆರಂಭಿಸಲಿದ್ದೇವೆ. ಶಾಲಾ ಮೂಲಸೌಕರ್ಯದ ತುರ್ತು ಅಗತ್ಯಗಳಿಗೆ ಸರ್ಕಾರ ನೆರವು ನೀಡಬೇಕಾಗಿದೆ.ಹರೀಶ ಮಾಂಬಾಡಿ, ಅಧ್ಯಕ್ಷರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net