ಐಟಿ ಕ್ಷೇತ್ರ ಬೆಳೆಯಲು ಬೆಳಗಾವಿ ಪ್ರಶಸ್ತ - ಆರ್.ಕೆ.ಪಾಟೀಲ

02
Published on

ಬೆಳಗಾವಿ: ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕ ಹೊಂದಿರುವ, ಆಟೋಮೊಬೈಲ್ ಬಿಡಿಭಾಗಳ ಉತ್ಪಾದನೆ, ರಪ್ತು ಮಾಡುವುದರಲ್ಲಿ ಬೆಳಗಾವಿ ಮುಂಚೂಣಿಯಲ್ಲಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರ ಬೆಳೆಯಲು ಪೂರಕ ವಾತಾವರಣವಿದೆ. ಉದ್ಯಮಿಗಳು ಸದುಪಯೋಗ ಪಡೆಯಬೇಕು ಎಂದು ವಾಯವ್ಯ ಲ್ಯಾಬ್ಸ್ ಸಂಸ್ಥಾಪಕ ಉದ್ಯಮಿ ಆರ್.ಕೆ.ಪಾಟೀಲ ಹೇಳಿದರು.

ನಗರದ ಖಾಸಗಿ ಕ್ಲಬ್‌ನಲ್ಲಿ ಬೆಳಗಾವಿ ಟೆಕ್ನಾಲಜಿ ಕಂಪನಿಗಳ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎರಡನೇ ಆವತ್ತಿಯ ಬೆಳಗಾವಿ ಟೆಕ್‌ಮಿಟ್ ಅಪ್-02 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ ವೇಗವಾಗಿ ಬೆಳೆಯುತ್ತಿದೆ. ಜತೆಗೆ 50ರಿಂದ 60 ತಾಂತ್ರಿಕ ಕಂಪನಿಗಳು ಇಲ್ಲಿ ಸೇವೆ ಸಲ್ಲಿಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ವಿಶ್ವದರ್ಜೆಯಲ್ಲಿ ವಹಿವಾಟು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸರ್ವೋ ಕಂಟ್ರೋಲ್ಸ್ ಮತ್ತು ಏಕಸ್ ನಂತಹ ಕಂಪನಿಗಳು ದೇಶಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದು ಬೆಳಗಾವಿ ಕೀರ್ತಿಯನ್ನು ಹೆಚ್ಚಿಸಿ ನವೋದ್ಯಮಿಗಳಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತಿವೆ ಎಂದರು.

ಉದ್ಯಮಿ ಇಲಿಯಾಸ್ ಶಿರೋಳ ಮಾತನಾಡಿ, ನವೋದ್ಯಮ ಮಾಡಲು ಒಂದೇ ದಿನದಲ್ಲಿ ಸಾಧ್ಯವಿಲ್ಲ. ಇದಕ್ಕೆ ಸಾಕ್ಷಷ್ಟು ಶ್ರಮ ಪಡಬೇಕಾಗುತ್ತದೆ. ಗ್ರಾಹಕರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಸಾಮರ್ಥ್ಯ ಇರಬೇಕು. ಯಾವುದೇ ಒಂದು ಪ್ರಾಡಕ್ಟ್ ಸಿದ್ಧಪಡಿಸಿದರೆ ಲಾಭವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಬರುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ನಾವು ಸಿದ್ಧಪಡಿಸಿದ ಪ್ರಾಡಕ್ಟ್‌ಗಳು ಇಷ್ಟವಾಗುವ ಹಾಗೆ ಇರಬೇಕು ಎಂದರು.

ಭೌಗೋಳಿಕವಾಗಿ ಬೆಳಗಾವಿ ದೊಡ್ಡದಾಗಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ, ಅತ್ಯುತ್ತಮ ವಾತಾವರಣ ಇದೆ. ಹೆಚ್ಚೆಚ್ಚು ಕಂಪನಿ ಸ್ಥಾಪಿಸುವ ಅಗತ್ಯವಿದೆ. ಉದ್ಯಮಿಗಳು ಇಂತಹ ಟೆಕ್ ಮಿಟ್‌ಗಳನ್ನು ಪದೇ ಪದೆ ಆಯೋಜಿಸಿ ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಉದ್ಯಮಿಗಳಾದ ಅಜಿತಕುಮಾರ ಪಾಟೀಲ, ಹಿತೇಶ ಧರ್ಮ ದಾಸನಿ, ಕರಣ, ಹರೀಶ ಟೋಪಣ್ಣವರ, ಪರಾಗ್, ಚೇತನಾ ಸಾರಂಗ, ಉದಯ ಕಿಂಜವಾಡ್ಕರ, ಪ್ರವೀಣ ಕೆಮಲಾಪುರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net