

ಚನ್ನಪಟ್ಟಣ: ಎಲ್ಲ ಇಲಾಖೆಗಳ ಮುಖ್ಯಸ್ಥರು ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಪಟ್ಟಿಮಾಡಿ. ತಾಲೂಕಿನ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ. ತಾಲೂಕು ಆಡಳಿತವನ್ನು ಜನಸ್ನೇಹಿಯಾಗಿಸಲು ಶ್ರಮಿಸೋಣ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕರೆನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇವಲ ಸಾಂಪ್ರದಾಯಿಕ ಸಭೆಯಷ್ಟೇ. ಎಲ್ಲ ಇಲಾಖೆಗಳ ಮುಖ್ಯಸ್ಥರು, ಆಯಾ ಇಲಾಖೆಯಲ್ಲಿನ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ನನಗೆ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳ ಪ್ರತ್ಯೇಕ ಸಭೆ ನಡೆಸಲಾಗುವುದು. ಎಲ್ಲರೂ ಸೇರಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಸಭೆಯ ಆರಂಭಕ್ಕೂ ಮುನ್ನ ಅಧಿಕಾರಿಗಳನ್ನು ಪರಿಚಯಿಸಿಕೊಂಡ ಶಾಸಕರು, ತದನಂತರ, ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಅದ್ವಾನವಾಗಿವೆ. ರಸ್ತೆಯನ್ನು ಅಧಿಕಾರಿಗಳು ಯಾವ ರೀತಿ ನಿರ್ವಹಣೆ ಮಾಡುತ್ತಿದ್ದೀರಿ?, ರಸ್ತೆ ಮಧ್ಯದಲ್ಲಿಯೇ ಬೇಲಿಗಳು ಬೆಳೆದುಕೊಂಡಿವೆ. ಅವುಗಳನ್ನು ಈಕೂಡಲೇ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಿಪಿವೈ ತಾಕೀತು ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಭೆಯಲ್ಲಿ ಇಲಾಖೆ ವರದಿ ಮಂಡಿಸಿ, ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿದೆ. ಈ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕು ಫಲಿತಾಂಶದಲ್ಲಿ ಹಿಂದುಳಿದಿತ್ತು. ಇದೀಗ, ಶಿಕ್ಷಕರ ಕೊರತೆಯಿಂದ ಫಲಿತಾಂಶದ ಬಗ್ಗೆ ಭಯವಾಗುತ್ತಿದೆ. ಶಾಸಕರು ಕೂಡಲೇ ಸಮಸ್ಯೆ ನೀಗಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಶಿಶು ಅಭಿವೃದ್ಧಿ ಅಧಿಕಾರಿಗಳು, ನಗರ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಇಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಮೀನುಗಾರಿಕೆ, ಕೃಷಿ, ಸಾರಿಗೆ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅದರಲ್ಲೂ ಕಾಡಾನೆ ಹಾವಳಿ ಬಗ್ಗೆ ವಿಶೇಷ ಚರ್ಚೆ ನಡೆಯಿತು. ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಮಹೇಶ್, ತಾಪಂ ಇಒ ಸಂದೀಪ್, ಪೌರಾಯುಕ್ತ ಮಹೇಂದ್ರ, ಗ್ರೇಡ್-2 ತಹಸೀಲ್ದಾರ್ ಲಕ್ಷ್ಮಿದೇವಮ್ಮ, ನಗರ ಸಿಪಿಐ ರವಿಕಿರಣ್ ಸೇರಿ ತಾಕೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಕ್ವಾಲಿಟಿ ಕೆಲಸಗಳಾಗಲಿ
ಲೋಕೋಪಯೋಗಿ, ಜಿಪಂ, ನೀರಾವರಿ ಇಲಾಖೆ ಇಂಜಿನಿಯರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ತಾಲೂಕಿನಲ್ಲಿ ಕ್ವಾಲಿಟಿ ಕೆಲಸವಾಗಬೇಕು. ಕಾಮಗಾರಿಗಳು ಶಾಶ್ವತವಾಗಿ ಉಳಿಯಬೇಕು. ಸಣ್ಣ ನೀರಾವರಿಯಲ್ಲಿ ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿವೆ. ಯಾವುದೇ ಕಾರಣಕ್ಕೂ ಕಳಪೆ ಹಾಗೂ ಭೋಗಸ್‌ಬಿಲ್ಗೆ ಅವಕಾಶ ಇಲ್ಲ. ಕಾಮಗಾರಿಗಳನ್ನು ನಾನೇ ಖುದ್ದಾಗಿ ಪರಿಶೀಲಿಸುವೆ. ಸಣ್ಣ ಲೋಪವನ್ನೂ ಸಹಿಸಲ್ಲ. ಜಲಜೀವನ ಮಿಷನ್ ಯೋಜನೆಯಂತೂ ಸಾಕಷ್ಟು ಕಳಪೆಯಾಗಿದೆ. ಈ ವಿಚಾರದಲ್ಲಿ ನಿರ್ಧಾಕ್ಷಿಣ್ಯ ಆ್ಯಕ್ಷನ್ ತೆಗೆದುಕೊಳ್ಳುವೆ ಎಂದು ಸಿಪಿವೈ ಎಚ್ಚರಿಸಿದರು.
ಮಿಲ್ಕ್ ಇರಲಿ, ಲಿಕ್ಕರ್ ಬೇಡ!
ತಾಲೂಕಿನ ಹಲವೆಡೆ ಸಿಎಲ್-7(ಬಾರ್)ಗಳು ಹೆಚ್ಚಾಗಿವೆ. ಇಷ್ಟೊಂದು ಏಕೆ? ತಾಲೂಕಿನಲ್ಲಿ ಕುಡುಕರ ಸಂಖ್ಯೆ ಜಾಸ್ತಿಯಾಗಿದೆಯಾ? ತಾಲೂಕನ್ನು ಬೇರೆ ರೀತಿ ಅಭಿವೃದ್ಧಿ ಮಾಡೋಣ. ಕುಡುಕರ ತಾಲೂಕು ಮಾಡಬಾರದು. ಈ ವಿಚಾರದಲ್ಲಿ ಬಹಳಷ್ಟು ದೂರಿವೆ. ಮಹಿಳೆಯರು ನನ್ನ ಬಳಿ ಗೋಳು ತೋಡಿಕೊಳ್ಳುತ್ತಿದ್ದಾರೆ. ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ನಮ್ಮ ತಾಲೂಕು ಹಾಲು ಉತ್ಪಾದನೆಯಲ್ಲಿ ಇಡೀ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಓಕೆ. ಆದರೆ, ಲಿಕ್ಕರ್‌ನಲ್ಲಿ ಸ್ಥಾನ ಬೇಡ. ಮನೆಮುಂದೆ ಲಿಕ್ಕರ್ ಶಾಪ್ ಆದರೆ, ಜನರ ಗತಿಯೇನು? ಇನ್ನು ಮುಂದೆ ಇಂತಹುಗಳಿಗೆ ಉತ್ತೇಜನ ಬೇಡ ಎಂದು ಸಿಪಿವೈ ಸೂಚಿಸಿದರು.
ಪೋಡಿಮುಕ್ತ ಗ್ರಾಮಗಳಾಗಬೇಕು!
ತಾಲೂಕಿನ ಪ್ರತಿ ಗ್ರಾಮಗಳು ಪೋಡಿಮುಕ್ತವಾಗಬೇಕು. ಕಂದಾಯ ಗ್ರಾಮಗಳು ಸೇರಿ ಉಪಗ್ರಾಮಗಳ ಕೆಲಸ ತ್ವರಿತವಾಗಿ ನಡೆಯಬೇಕು. ಹಲವು ಗ್ರಾಮಗಳು ಇಂದಿಗೂ ಸಹ ದಾಖಲೆ ಗ್ರಾಮಗಳಾಗಿವೆ. ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮವಹಿಸಲಾಗುವುದು. ಆದರೆ, ಪೋಡಿಮುಕ್ತ ಕಾರ್ಯಕ್ರಮ ತಾಲೂಕಿನಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಶಾಸಕರು ಸೂಚಿಸಿದರು.