

ಪಿರಿಯಾಪಟ್ಟಣ: ಪಾಶ್ಚಿಮಾತ್ಯ ಜೀವನಶೈಲಿ ಅನುಕರಣೆಯಿಂದ ಏಡ್ಸ್ ನಂತಹ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೆ.ಶ್ವೇತಾ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್‌ಕೆಎಸ್‌ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಏಡ್ಸ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಕ್ಕೆ ಬಲಿಯಾಗದೆ ಕಲಿಕೆಯತ್ತ ಹೆಚ್ಚು ಗಮನಹರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಆಸೆ ಆಮಿಷಗಳಿಗೆ ಒಳಗಾಗಿ ಕ್ಷಣಿಕ ಸುಖದ ಬಗ್ಗೆ ಅತೀವ ಆಸಕ್ತಿ ವಹಿಸುವ ಮೂಲಕ ಲೈಂಗಿಕ ರೋಗಗಳಿಗೆ ತುತ್ತಾಗುವ ಅಪಾಯವನ್ನು ವಿದ್ಯಾರ್ಥಿಗಳು ತಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಚ್‌ಐವಿ ಹರಡುವ ಬಗ್ಗೆ ಮತ್ತು ಗರ್ಭಿಣಿ ತಾಯಂದಿಯರು ಎಚ್‌ಐವಿ ಸೋಂಕಿತರಾಗಿದ್ದಲ್ಲಿ ಮಗುವಿಗೆ ಸೋಂಕು ಸೂಕ್ತ ಚಿಕಿತ್ಸಾ ವಿಜ್ಞಾನ ಅನುಸರಿಸುವ ಮೂಲಕ ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್‌ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಧನಪಾಲ್, ವಕೀಲ ಹರೀಶ್ ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ರಾಜಣ್ಣ, ಆರೋಗ್ಯ ನಿರೀಕ್ಷಕ ಪ್ರಕಾಶ್, ಎನ್‌ಎಸ್‌ಎಸ್ ಅಧಿಕಾರಿ ಬೇಬಿ, ಆಪ್ತ ಸಮಾಲೋಚಕ ಎಂ.ಕೆ.ಪ್ರಕಾಶ್, ಉಪನ್ಯಾಸಕರಾದ ರೂಪಾ, ಲತಾ, ಥಾಮಸ್, ಮಹೇಶ್ ಕುಮಾರ್ ಇತರರು ಇದ್ದರು.