

ಕಾರವಾರ: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಽಕಾರಿಗಳು ಶುಕ್ರವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂಘದ ಸದಸ್ಯರು ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
2006 ರ ನಂತರ ನೇಮಕವಾದ ಅನುದಾನಿತ ಶಾಲಾ ನೌಕರರು ಹಾಗೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಹಾಗೂ 2006 ರ ಪೂರ್ವದಲ್ಲಿ ಇಲಾಖೆ ಅನುಮತಿ ಪಡೆದು ನೇಮಕವಾದವರಿಗೂ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು. 2015 ರ ನಂತರ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅವುಗಳನ್ನು ಭರ್ತಿ ಮಾಡುವ ಕಾರ್ಯ ಮಾಡಬೇಕು. ಬಸವರಾಜ ಹೊರಟ್ಟಿ ಸಮಿತಿಯ ಸಲ್ಲಿಸಿದ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ ಜಾರಿ ಮಾಡಬೇಕು. 1995 ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು. ಅನುದಾನಿತ ಶಾಲೆಗಳಲ್ಲಿ ಆಡಳಿತ ಮಂಡಳಿಯಿಂದ ನೇಮಕವಾಗಿ, ಇಲಾಖೆಯಿಂದ ಗುರುತಿಸಿ, ಆರ್ಥಿಕ ಇಲಾಖೆ ಅನುಮೋದನೆಗೆ ಸಲ್ಲಿಸಿರುವ ಡಿ ದರ್ಜೆ ನೌಕರರನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲಾ ಅಧ್ಯಕ್ಷ ಪ್ರಭಾಕರ ಬಂಟ್, ಜಿಲ್ಲಾ ಸಂಚಾಲಕ ಎಂ.ಟಿ.ಗೌಡ, ಜಿಲ್ಲಾ ಕಾರ್ಯದರ್ಶಿ ಎಲ್.ಎಂ.ಹೆಗಡೆ, ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ, ಅಂಕೋಲಾ ತಾಲೂಕು ಅಧ್ಯಕ್ಷ ಜಿ.ಆರ್.ನಾಯಕ, ಕುಮಟಾ ಅಧ್ಯಕ್ಷ ಅನಿಲ ರೋಡ್ರಿಗಸ್, ಹೊನ್ನಾವರ ಅಧ್ಯಕ್ಷ ಸಂತೋಷ ನಾಯ್ಕ, ಭಟ್ಕಳ ಅಧ್ಯಕ್ಷ ಶಬ್ಬಿರ್ ದಫೆದಾರ್ ಈ ಸಂದರ್ಭದಲ್ಲಿದ್ದರು.