

ಶಿರಸಿ: ತಾಲೂಕಿನ ಐತಿಹಾಸಿಕ ಪ್ರದೇಶವಾದ ಸೋಂದಾದ ಕಡೇಗುಂಟದಲ್ಲಿ 800 ವರ್ಷಗಳ ಹಿಂದಿನ ವೀರಗಲ್ಲು ಶಾಸನ ಬೆಳಕಿಗೆ ಬಂದಿದೆ.
ಕಡೇಗುಂಟದ ಶಶಾಂಕ ಮರಾಠೆ ಎಂಬುವವರು ನೀಡಿದ ಮಾಹಿತಿ ಮೇರೆಗೆ ಇತಿಹಾಸಕಾರ ಡಾ. ಲಕ್ಷ್ಮೀಶ ಸೋಂದಾ ಮತ್ತು ಪೊ. ನಾಗರಾಜ ರಾವ್ ಮೈಸೂರು ಅವರು ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಶಾಸನ ಬೆಳಕಿಗೆ ಬಂದಿದೆ.
ಇದೊಂದು ವೀರಗಲ್ಲು ಶಾಸನವಾಗಿದ್ದು, ಹಳೆಗನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಯುದ್ಧದಲ್ಲಿ ಮಡಿದ ಕಡೇಗುಂಟದ ವೀರಯೋಧನ ನೆನಪಿಗೆ ಈ ಸ್ಮಾರಕ ಶಿಲೆ ನಿಲ್ಲಿಸಲಾಗಿತ್ತು. ಇದರಲ್ಲಿನ ಚಿತ್ರಗಳು, ಶಿಲ್ಪಗಳು ವಿಶೇಷವಾಗಿವೆ. ಬಹುತೇಕ ಅಕ್ಷರಗಳು ಕಾಣದಂತಾಗಿವೆ. ಇದರಿಂದ ತಿಳಿದು ಬರುವ ಕೆಲ ವಿಷಯಗಳೇನೆಂದರೆ ಬನವಾಸಿ ನಾಡನ್ನು ಮಹಾಮಂಡಳೇಶ್ವರ ಆಳ್ವಿಕೆ ಮಾಡುತ್ತಿದ್ದಾಗ ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಕುಜವಾರದಂದು ನಡೆದ ಯುದ್ಧದಲ್ಲಿ ಕಡೇಗುಂಟದ ವೀರನಾದ ಮಸಣ್ಣನು ವೀರ ಮರಣವನ್ನಪ್ಪಿದ ಎಂಬುದಾಗಿದೆ. ಅಂತೆಯೇ ಇದರಲ್ಲಿ ಕಾರವಾರ ಮತ್ತು ಮಣಲಿಯ ವೀರರಾದ ಕಲಗೌಡ ಮತ್ತು ಬೊಮ್ಮಗೌಡರ ಹೆಸರಿನ ಉಲ್ಲೇಖವಿದೆ. ಸೋದೆ ಅರಸರ ಕಾಲದ ಪೂರ್ವದ ಈ ಶಾಸನ ಸೋಂದಾದ ಕಡೇಗುಂಟದಲ್ಲಿ ಸಿಕ್ಕಿರುವುದು ಸೋದೆ ಅರಸರ ಪೂರ್ವದಲ್ಲೇ ಅಂದರೆ ಕ್ರಿ.ಶ 12ನೇ ಶತಮಾನದಲ್ಲೇ ಸೋಂದಾ ಒಂದು ಆಡಳಿತಾತ್ಮಕ ಪ್ರದೇಶವಾಗಿತ್ತು ಎಂಬುದನ್ನು ಗಟ್ಟಿಗೊಳಿಸಲು ಸಹಾಯಕವಾಗಿದೆ. 12ನೇ ಶತಮಾನದಿಂದ ಇಂದಿನವರೆಗೂ ಕಡೆಗುಂಟ ಶಬ್ಧ ಪ್ರಯೋಗ ಬದಲಾಗದೆ ಹಾಗೆ ಉಳಿದಿರುವುದು ವಿಶೇಷವಾಗಿದೆ. ಅಂತೆಯೇ ಇಲ್ಲಿರುವ ರಾಮಲಿಂಗೇಶ್ವರ ಗುಡಿ ಕೂಡಾ ಪುರಾತನವಾಗಿದ್ದು, ಇದು ಕೂಡಾ 800 ವರ್ಷಗಳ ಹಿಂದೆಯೇ ನಿರ್ವಣವಾಗಿತ್ತು ಎಂದು ಇತಿಹಾಸಕಾರರಾದ ಡಾ.ಲಕ್ಷ್ಮೀಶ ಸೋಂದಾ ತಿಳಿಸಿದ್ದಾರೆ.