

ಮೂಡುಬಿದಿರೆ: ತೀವ್ರತರವಾದ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಮಂಗಳೂರಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸೃಜನ್ ಕುಕ್ಯಾನ್ ಅವರ ವೈದ್ಯಕೀಯ ಚಿಕಿತ್ಸೆಗೆ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು.
ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸೃಜನ್ ಕುಕ್ಯಾನ್ ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ. ಹೆಚ್ಚಿನ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಮಧ್ಯಮ ವರ್ಗದ ಬಾಲಕನ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆತನ ಕುಟುಂಬದ ಸದಸ್ಯರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಕೂಡಲೇ ಸ್ಪಂದಿಸಿದ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಆರ್ಥಿಕ ಬೆಂಬಲ ನೀಡುವುದರ ಜತೆಗೆ ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಸಹಕಾರದೊಂದಿಗೆ 5 ಲಕ್ಷ ರೂ. ಮೊತ್ತವನ್ನು ಬಾಲಕನ ಕುಟುಂಬಕ್ಕೆ ನೀಡಿದ್ದಾರೆ.