

ರಾಮನಗರ
ಗ್ರಾಮೀಣ ಜನರ ಪಾಲಿಗೆ ಉದ್ಯೋಗ ಒದಗಿಸುವ ನರೇಗಾ ಯೋಜನೆಯ ಸಮುದಾಯ ಕಾಮಗಾರಿಗಳ ಹಾಜರಾತಿಯಲ್ಲಿ ನಡೆಯುತ್ತಿದ್ದ ಮೋಸದಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರ ಕೃತಕ ಬುದ್ಧಿ ಮತ್ತೆ (ಎಐ) ಆಧಾರಿತ ಲೆಕ್ಕ ಪಡೆಯಲು ಮುಂದಾಗಿದೆ.
ರಾಜ್ಯಾದ್ಯಂತ ಎಐ ಆಧಾರಿತ ಈ ತಂತ್ರಾಂಶ ಜಾರಿಗೆ ಬಂದಿದ್ದು, ಇದರಿಂದ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿನ ಹಾಜರಾತಿ ಲೋಪ, ಕೂಲಿ ಹಣ ದುರ್ಬಳಕೆಗೆ ಕಡಿವಾಣ ಬೀಳಲಿದೆ.
ಈ ಮೊದಲು ಜಿಪಿಎಸ್ ಆಧಾರಿತ ಫೋಟೋ ಬಳಕೆ ಮಾಡಿದರೆ ಸಾಕು ಎನ್ನುವಂತೆ ಕಾಮಗಾರಿಗಳು ನಡೆಯುತ್ತಿದ್ದವು. ನಂತರ ಸಮುದಾಯ ಕಾಮಗಾರಿಯಲ್ಲಿ ಕೆಲಸ ಮಾಡುವವರ ಹಾಜರಾತಿಗಾಗಿ 2022ರಲ್ಲಿ ಎನ್‌ಎಂಎಂಎಸ್ ಅನುಷ್ಠಾನಗೊಳಿಸಲಾಗಿತ್ತು. ಗುಂಪಿನಲ್ಲಿ ಕೆಲಸ ನಡೆಯುವ ಫೋಟೋ ತೆಗೆದು, ಮನರೇಗಾ ತಂತ್ರಾಂಶದಲ್ಲಿ ಅಳವಡಿಸಬೇಕಾಗಿತ್ತು.
ಆದರೆ, ಇಲ್ಲಿ ಲೆಕ್ಕ ತಪ್ಪು ಸಾಧ್ಯತೆ ಹೆಚ್ಚಿದ್ದ ಕಾರಣ ಯೋಜನೆ ದುರ್ಬಳಕೆಯೂ ಆಗುತಿತ್ತು. ಜತೆಗೆ ಗ್ರಾಪಂನಲ್ಲಿನ ಕಾಯಕ ಬಂಧುಗಳು, ಬಿಎಫ್‌ಟಿ, ತಾಂತ್ರಿಕ ಸಹಾಯಕರು ಲಾಗಿನ್ ಮೂಲಕ ಸಮುದಾಯ ಕಾಮಗಾರಿಗಳ ಹಾಜರಾತಿಯನ್ನು ಅಪ್ಲೋಡ್ ಮಾಡುತ್ತಿದ್ದರು. ಇದು ಮನರೇಗಾ ಹಣ ದುರ್ಬಳಕೆಗೂ ದಾರಿ ಮಾಡಿಕೊಟ್ಟಿತ್ತು. ಈಗ ಎಐ ಆಧಾರಿತ ತಲೆ ಎಣಿಕೆ ಕಾರ್ಯ ಹಗರಣಗಳಿಗೆ ಮುಕ್ತಿ ನೀಡಲಿದೆ.
ಸಮುದಾಯ ಕಾಮಗಾರಿಗಳ ಗುಂಪಿನಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನಲು ಫೋಟೋ ಬಳಕೆ ಮಾಡಲಾಗುತ್ತಿತ್ತು. ಈಗ ಈ ಫೋಟೋದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದು ತಲೆ ಎಣಿಕೆ ಪದ್ಧತಿ ಮೂಲಕ ತಂತ್ರಾಂಶವೇ ಲೆಕ್ಕ ಹಾಕಲಿದೆ. ಒಂದು ವೇಳೆ ಇಲ್ಲಿ ಅಂಕಿಗಳು ಬದಲಾದರೆ, ಹಾಜರಾತಿ ಅಪ್ಲೋಡ್ ಆಗುವುದೇ ಇಲ್ಲ.
ಕೆಲ ಹೈ ಹ್ಯಾಂಡ್ ಫೋನ್‌ಗಳಲ್ಲಿ ಫೇಸ್ ರೆಕಗ್ನಿಷನ್ ಮೂಲಕ ಫೋಟೋ ಕ್ಲಿಕಿಸುವ ವೇಳೆ ಪ್ರತಿ ಮುಖದ ಮೇಲೂ ಫೋಕಸ್ ಬೀಳಲು, ಮಾರ್ಕ್ ಆಗುವ ಮಾದರಿಯಲ್ಲಿಯೇ ಸಮುದಾಯ ಕಾಮಗಾರಿಗಳ ೆಟೋ ಅಪ್ಲೋಡ್ ಮಾಡುವ ವೇಳೆ ತಲೆ ಎಣಿಕೆ ಮಾಡಿ, ತಂತ್ರಾಶವೇ ಮಾಹಿತಿ ನೀಡಲಿದೆ. ಇದರಿಂದಾಗಿ ಹಾಜರಾತಿಯಲ್ಲಿ ಪಾರದರ್ಶಕತೆ ಮಾತ್ರವಲ್ಲದೇ, ಮನರೇಗಾ ಕೂಲಿ ಹಣ ಸೋರಿಕೆಗೂ ಕಡಿವಾಣ ಬೀಳಲಿದೆ. ಬೆಳಗ್ಗೆ ಒಮ್ಮೆ ಫೋಟೊ ಅಪ್ಲೋಡ್ ಮೂಲಕ ಹಾಜರಾತಿ ನೀಡಿದರೆ, 4 ಗಂಟೆ ಬಳಿಕ ಮತ್ತೊಂದು ಫೋಟೋ ಮೂಲಕ ಹಾಜರಾತಿ ನೀಡಬೇಕಿದೆ.