ಎಐ ಸಿಟಿ ಭೂಸ್ವಾಧಿನಕ್ಕೆ ಸಹಮತ

26-09-rama-GBDA
Published on

> ಹೆಚ್ಚಿಗೆ ಪರಿಹಾರಕ್ಕೆ ಕೆಂಪಯ್ಯನಪಾಳ್ಯದ ರೈತರ ಮನವಿ

ರಾಮನಗರ

ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಮುಂದಾಗಿರುವ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧಿನ ಮಾಡಿಕೊಳ್ಳಲು ಕೆಂಪಯ್ಯನಪಾಳ್ಯದ ರೈತರು ಒಪ್ಪಿಗೆ ಸೂಚಿಸಿ, ಹೆಚ್ಚಿನ ಪರಿಹಾರ ನೀಡುವಂತೆ ಕೋರಿದ್ದಾರೆ.

ನಗರದ ಕಂದಾಯ ಭವನದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಜಿ.ಎನ್​.ನಟರಾಜ್​ ಅವರನ್ನು ಗುರುವಾರ ಭೇಟಿ ಮಾಡಿದ ಕಂಚುಗಾರನಹಳ್ಳಿ ಗ್ರಾಪಂನ ಕೆಂಪಯ್ಯನಪಾಳ್ಯದ ರೈತರು, ಯೋಜನೆಗಾಗಿ ಭೂ ಸ್ವಾಧಿನಕ್ಕೆ ಒಪ್ಪಿಗೆ ಸೂಚಿಸಿ ಕೆಲ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಿದರು.

ಯೋಜನೆಗೆ ಭೂಸ್ವಾಧಿನ ವಿರೋಧಿಸಿ ಪ್ರತಿಭಟನೆ ಮುಂದುವರಿದಿದೆ. ಇದರ ನಡುವೆಯೇ ಇಲ್ಲಿನ ಸಮಸ್ಯೆಯನ್ನು ತೆರೆದಿಟ್ಟಿರುವ ರೈತರು, 2006ರಲ್ಲಿ ಉಪನಗರ ಯೋಜನೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ, ಇಡೀ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಿದ್ದರಿಂದ ಈ ಭಾಗದ ರೈತರು 18 ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರ ಈಗ ಉಪನಗರ ಮತ್ತು ಎಐ ನಗರ ಯೋಜನೆ ಜಾರಿಗೆ ಮುಂದಾಗುವ ಮೂಲಕ ಸಂಕಷ್ಟ ಕೊನೆಯಾಗಿದೆ ಎಂದು ಗ್ರಾಮದ ಮುಖಂಡರಾದ ಚಂದ್ರಾರೆಡ್ಡಿ ಮತ್ತು ಲಕ್ಷ್ಮೀ ನಾರಾಯಣ ರೆಡ್ಡಿ ಅಧ್ಯಕ್ಷರ ಬಳಿ ಸಂತಸ ಹಂಚಿಕೊಂಡರು.

ಭೂಮಿ ಕೊಡುವ ರೈತರಲ್ಲಿ ಯೋಜನೆಗೆ ಸಹಭಾಗಿದಾರರಾಗಲು ಬಯಸುವರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ಕೊಡಬೇಕು. ಪರಿಹಾರ ಪಡೆಯಲು ಇಚ್ಛಿಸುವವರಿಗೆ ಪ್ರತಿ ಎಕರೆಗೆ ಗರಿಷ್ಠ 3 ಕೋಟಿ ರೂ.ವರೆಗೆ ಪರಿಹಾರ ನೀಡಬೇಕು. ಇದರಿಂದ ರೈತರು ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿ.ಎನ್​.ನಟರಾಜ್​, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನೀಡಿದ ಭರವಸೆಯಂತೆ, ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ನಿವೇಶನಗಳನ್ನು 50:50 ಅನುಪಾತದಲ್ಲಿ ಮತ್ತು ವಾಣಿಜ್ಯ ಉದ್ದೇಶದ ನಿವೇಶನಗಳನ್ನು 45:50 ಅನುಪಾತದಲ್ಲಿ ನೀಡಲಾಗುವುದು. 2013ರ ಕಾಯ್ದೆ ಅನ್ವಯ ಗರಿಷ್ಠ 1.50 ಕೋಟಿ ರೂ.ನಿಂದ 3 ಕೋಟಿ ರೂ.ವರೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಯೋಜನೆಗೆ ಸಂಬಂಧಿಸಿದಂತೆ ಕೆಲವರು ಗೊಂದಲ ಸೃಷ್ಟಿಸುವ ಜತೆಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯೋಜನೆಯ ರೂಪುರೇಷೆಗಳ ಕುರಿತು ಈಗಾಗಲೇ ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಆದರೂ, ಕೆಲವರು ಅಪಪ್ರಚಾರವನ್ನು ಮುಂದುವರಿಸಿದ್ದಾರೆ. ರೈತರು ಅದ್ಯಾವುದಕ್ಕೂ ಕಿವಿಕೊಡದೆ, ಏನೇ ಗೊಂದಲಗಳಿದ್ದರೂ ಪ್ರಾಧಿಕಾರದ ಕಚೇರಿಗೆ ಬಂದು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net