ಅಹಲ್ಯಾಬಾಯಿ ಹೋಳ್ಕರ್ ಜೀವನ ಚರಿತ್ರೆ ಸ್ಫೂರ್ತಿದಾಯಕ

ಅಹಲ್ಯಾಬಾಯಿ ಹೋಳ್ಕರ್ ಜೀವನ ಚರಿತ್ರೆ ಸ್ಫೂರ್ತಿದಾಯಕ
Published on

ವಿರಾಜಪೇಟೆ: ಆಧುನಿಕ ಸಮಾಜಕ್ಕೆ ಹಾಗೂ ಸ್ತ್ರೀ ವರ್ಗದವರಿಗೆ ಅಹಲ್ಯಾಬಾಯಿ ಹೋಳ್ಕರ್ ಜೀವನ, ಸಂಸ್ಕೃತಿ ಹಾಗೂ ಸಂಸ್ಕಾರ ಸ್ಫೂರ್ತಿದಾಯಕ ಎಂದು ಸಾಮಾಜಿಕ ಕಾರ್ಯಕರ್ತೆ ವಿಮಲಾ ದಶರಥ್ ಅಭಿಪ್ರಾಯಪಟ್ಟರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಮಹಿಳಾ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಹಲ್ಯಾಬಾಯಿ ಹೊಳ್ಕರ್ ಅವರ ತ್ರಿಶತಾಬ್ದಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರು ಧರ್ಮ ರಕ್ಷಣೆ ಕಾರ್ಯವನ್ನು ಮಾಡಿ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೆಣ್ಣು ತಾಳ್ಮೆಯಲ್ಲಿ ಮಹಾ ಗೌರಿ ಸ್ವರೂಪಳು, ತೊಂದರೆ, ದೌರ್ಜನ್ಯ ಎದುರಾದಾಗ ದುರ್ಗೆಯಂತ ಸ್ವರೂಪ ತಾಳುತ್ತಾಳೆ ಎಂಬುದಕ್ಕೆ ಅಹಲ್ಯಾಬಾಯಿ ಹೋಳ್ಕರ್ ಒಂದು ಉತ್ತಮ ನಿದರ್ಶನ ಎಂದರು.

ಅಹಲ್ಯಾಬಾಯಿ ಹೋಳ್ಕರ್ ಅಂತಹ ಸ್ತ್ರೀಯರ ಪರಾಕ್ರಮದ ಕಥೆಗಳು ಯುವ ಜನತೆಗೆ ಮಾರ್ಗದರ್ಶನವಾಗಬೇಕು. ಔರಂಗಜೇಬ್‌ನಂತಹ ಬಲಿಷ್ಠ ಸೈನ್ಯವನ್ನೇ ಹಿಮ್ಮೆಟ್ಟಿಸಿ ಸ್ತ್ರೀಯರ ಪರಾಕ್ರಮ ಎಂತಹದ್ದು ಎಂದು ತಿಳಿಸಿಕೊಟ್ಟವರು ಅಹಲ್ಯಾ ಬಾಯಿ, ಇಂತಹ ವೀರ ವನಿತೆಯ ಜೀವನ ಹಾಗೂ ಸಾಧನೆ ನಮ್ಮ ಯುವ ಜನರಿಗೆ ಸ್ಫೂರ್ತಿ ಆಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲೆ ಡಾ.ವೀಣಾ ಮಾತನಾಡಿ, ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಉತ್ತಮ ಅವಕಾಶ, ಸಮಾನತೆ, ಗೌರವವಿತ್ತು. ಪರಕೀಯರ ದಾಳಿಯಿಂದ ವಾತಾವರಣ ಬದಲಾಯಿತು. ಆಧುನಿಕ ಕಾಲದಲ್ಲಿಯೂ ಈಗ ಸ್ತ್ರೀಯರಿಗೆ ಸಿಗುತ್ತಿರುವ ಸ್ವಾತಂತ್ರೃ, ಸಮಾನತೆ, ಶಿಕ್ಷಣ ಅಹಲ್ಯಾ ಬಾಯಿ ಅವರ ಪರಿಕಲ್ಪನೆ ಆಗಿದೆ. ತನ್ನ ಸಾಮ್ರಾಜ್ಯದಲ್ಲಿರುವ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ವಿದ್ಯಾ ಸಂಸ್ಥೆಗಳನ್ನು ತೆರೆಯಿಸಿ ಎಂದು ಮುನ್ನೂರು ವರ್ಷಗಳ ಹಿಂದೆ ಅವರು ಮಾಡಿದಂತಹ ಸಾಮಾಜಿಕ, ಧಾರ್ಮಿಕ ಕೆಲಸಗಳು ಮೆಚ್ಚುವಂತಹದ್ದು. ಇಂತಹ ವೀರ ವನಿತೆಯರ ಶ್ರೇಷ್ಠ ವ್ಯಕ್ತಿತ್ವ, ಧೈರ್ಯ, ಪರಾಕ್ರಮ ಹಾಗೂ ಸಾಧನೆಗಳು ಪಾಠ ಪ್ರವಚನದ ಮೂಲಕ ನಮ್ಮ ಯುವ ಜನರಿಗೆ ತಲುಪುವಂತಾಗಬೇಕೆಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕೌಶಲ್ಯಾ, ಮುತ್ತಮ್ಮ, ಅಂಜು, ಅಹಲ್ಯಾ ಬಾಯಿ ಹೋಳ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತು ವಿಚಾರ ಮಂಡನೆ ಮಾಡಿದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ, ಕಾಲೇಜಿನ ಮಹಿಳಾ ಘಟಕದ ಸಂಚಾಲಕಿ ಬಿ.ಯು.ಅಂಬಿಕಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಂಚಾಲಕ ಎಚ್.ವಿ.ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net