ಆರ್ಥಿಕತೆಗೆ ಕೃಷಿ ಕೊಡುಗೆ ಅಪಾರ

rama
Published on

ರಾಮನಗರ: ಭವಿಷ್ಯದಲ್ಲಿ ರೈತರಿಗೆ ಒಳಿತಾಗಲಿದ್ದು, ಅಲ್ಲಿಯವರೆಗೂ ಜಮೀನುಗಳನ್ನು ಕಷ್ಟವಾದರೂ ಕಾಪಿಟ್ಟುಕೊಳ್ಳಬೇಕು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಬಿಜಿಎಸ್​ ಅಂಧರ ಶಾಲೆ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆ, ವಿಸ್ಮಯ ಬುಕ್​ಹೌಸ್​ ಮತ್ತು ರೈತ ಬಳಗ ಮಂಗಳವಾರ ಆಯೋಜಿಸಿದ್ದ "ದಿಟ್ಟನಡೆ ಸ್ಪಷ್ಟ ನುಡಿ' ಮತ್ತು "ಬೆವರ ಹನಿ' 2 ಕೃತಿಗಳ ಬಿಡುಗಡೆ ಹಾಗೂ ರೈತ ನಾಯಕ ಸಿ.ಪುಟ್ಟಸ್ವಾಮಿ ಅವರಿಗೆ ರೈತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಋಷಿ ಸಂಸತಿಗಿಂತಲೂ ಮೊದಲು ಇದ್ದದ್ದು ಕೃಷಿ ಸಂಸತಿ. 450 ಕೋಟಿ ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಂಸತಿಗಳು ಬಂದು ಹೋಗಿದ್ದರೂ, ಕೃಷಿ ಸಂಸತಿ ಮಾತ್ರ ಉಳಿದಿದೆ ಎಂದರು.

ಯಾವುದೇ ದೇಶದ ಅಭಿವೃದ್ಧಿಯನ್ನು ಜಿಡಿಪಿ ಮೇಲೆ ಅಳೆಯಲಾಗುತ್ತದೆ. ಹಿಂದೆ ನಮ್ಮ ದೇಶದ ಆರ್ಥಿಕತೆಗೆ ಕೃಷಿ ಕೊಡುಗೆ ಅಪಾರವಾಗಿತ್ತು. ಕೈಗಾರಿಕಾ ಕ್ರಾಂತಿಯ ನಂತರ ಕುಸಿತ ಕಂಡಿದೆ. ಆದರೆ ದುಡಿಮೆಗೆ ಉತ್ತಮ ಬೆಲೆ ಸಿಗುತ್ತದೆ ಎಂದರೆ ಖಂಡಿತ ಕೃಷಿ ಕ್ಷೇತ್ರ ಮತ್ತೆ ವಿಜೃಂಭಿಸುತ್ತದೆ. ಕೃಷಿಯನ್ನು ಆಧುನಿಕ ಬದಲಾವಣೆಯೊಂದಿಗೆ ಮಾಡಿದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ಮುಂದಿನ 25 ವರ್ಷಗಳಲ್ಲಿ ಬೆಂಗಳೂರು ಜನ ಸಂಖ್ಯೆ 3 ಕೋಟಿ ಮೀರಲಿದೆ. ಇದರಿಂದ ಬೆಂಗಳೂರು ಸುತ್ತ ಮುತ್ತ ಕೃಷಿ ಜಮೀನು ಏನಾಗಬೇಕು? ಅಭಿವೃದ್ಧಿ ಹೆಸರಲ್ಲಿ ಫಲವತ್ತಾದ ಭೂಮಿಯನ್ನು ಸರ್ಕಾರ ಸ್ವಾಧಿನ ಪಡಿಸಿಕೊಳ್ಳುತ್ತದೆ. ವಿದೇಶಗಳಲ್ಲಿ ಅಭಿವೃದ್ಧಿ ವಿಕೇಂದ್ರೀಕರಣಗೊಂಡಿದೆ.

ಬೇರೆ ಬೇರೆ ನಗರಗಳನ್ನು ಅಭಿವೃದ್ಧಿ ಪಡಿಸಿ, ಕೈಗಾರಿಕೆಗಳನ್ನು ಅಲ್ಲಿಯೂ ನೆಲೆಗೊಳ್ಳುವಂತೆ ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ಕೃಷಿ ಯೋಗ್ಯವಲ್ಲದ ಭೂಮಿಯಿದ್ದು, ಇವುಗಳನ್ನು ಗುರುತಿಸಿ ಅಗತ್ಯ ಸೌಲಭ್ಯ ನೀಡುವ ಮೂಲಕ ಅಲ್ಲಿ ಕಾರ್ಖಾನೆಗಳನ್ನು ಆರಂಭಿಸಬೇಕು ಎಂದರು.

ದೇವನಹಳ್ಳಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕುರಿತಂತೆಯೂ ಮಾತನಾಡಿದ ಅವರು, ರೈತರು ಯಾವುದೇ ಕಾರಣಕ್ಕೂ ಒಗ್ಗಟ್ಟು ಕಳೆದುಕೊಳ್ಳಬಾರದು ಎಂದು ಕರೆ ನೀಡಿದರು.

ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡ ಸ್ವಾಮಿ ಮಾತನಾಡಿ, ಪ್ರೊ. ನಂಜುಂಡ ಸ್ವಾಮಿ ಹೋರಾಟವನ್ನು ಬರವಣಿಗೆ ರೂಪಕ್ಕೆ ಇಳಿಸಿದ್ದು ಕಡಿಮೆಯೇ. ಹೋರಾಟಗಳು ಈಗ ಕೇವಲ ಫೋಟೋಗಾಗಿ, ಹಣದ ಸುತ್ತ ಮುತ್ತವೇ ನಡೆಯುವ ಕಾಲಟ್ಟದಲ್ಲಿ ನಾವಿದ್ದೇವೆ. ಇದರ ಹೊರತಾಗಿಯೂ ಸಮ ಸಮಾಜ ನಿರ್ಮಾಣದ ಸಿದ್ಧಾಂತವಿರುವ ಹೋರಾಟಗಾರರು ಪ್ರತಿ ಗ್ರಾಮದಲ್ಲಿಯೂ ಇದ್ದಾರೆ. ಇದಕ್ಕೆ ಕಾರಣ ಹಿಂದೆ ಬಿತ್ತಿದ ಹೋರಾಟದ ನೈಜ ಬೀಜ. ಹಿಂದಿನ ಹೋರಾಟಗಳಿಗಿಂತಲೂ ಜಟಿಲವಾದ ಸಮಸ್ಯೆಗಳು ಈಗ ಇವೆ. ಇವುಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ಶಾಸಕ ಸಿ.ಪಿ. ಯೋಗೇಶ್ವರ್​ ಮಾತನಾಡಿ, ಬಹಳಷ್ಟು ರೈತ ಹೋರಾಟಗಳು ರಾಜ್ಯದಲ್ಲಿ ಸಾಕಷ್ಟು ಫಲ ನೀಡಿವೆ. ಅಧಿಕಾರಸ್ತರಿಗೆ ಚುರುಕು ಮುಟ್ಟಿಸುವ ಹಾಗೂ ಸರಿದಾರಿಗೆ ತರುವ ಕೆಲಸ ಹೋರಾಟಗಾರರು ಮಾಡುತ್ತಿದ್ದಾರೆ. ನೀರಾ ಉತ್ಪನ್ನಗಳಿಗೆ ಜಿಎಸ್​ಟಿ ತೆಗೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಮುಂದಾಗಿದ್ದೇನೆ. ಈ ನಿಟ್ಟಿನಲ್ಲಿ ಸಂಸದರಿಗೆ ಮನವಿ ಮಾಡಲಾಗಿದೆ ಎಂದರು.

ಇದೇ ವೇಳೆ ರೈತ ಮುಖಂಡ ಸಿ.ಪುಟ್ಟಸ್ವಾಮಿ ಅವರಿಗೆ ರೈತ ರತ್ನ ಬಿರುದು ನೀಡಿ ಗೌರವಿಸಲಾಯಿತು. ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಲ್ಲೇಶ್​ ಗುರೂಜಿ, ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆೆ, ಎಸ್​ ಕರಣ್​ ಕುಮಾರ್​ , ಪತ್ರಕರ್ತ ವೀರಭದ್ರಪ್ಪ ಬಿಸ್ಲಹಳ್ಳಿ, ಪ್ರಕಾಶ್​ ಚಿಕ್ಕಪಾಳ್ಯ, ಪ್ರೊ. ಎಚ್​. ಕೃಷ್ಣೇ ಗೌಡ, ಡಾ.ಕೃಷ್ಣ , ಗೋರ ಶ್ರೀನಿವಾಸ್​ ಮುಂತಾದವರು ಇದ್ದರು.

ಹೋರಾಟ ಜಾಗತಿಕ ಜ್ಞಾನ ನೀಡಿದೆ. ಈ ಅನುಭವವನ್ನು ಕೃತಿ ರೂಪಕ್ಕೆ ತಂದರೆ ಅದನ್ನು ಹೊಸ ತಲೆಮಾರು ಹೇಗೆ ಸ್ವೀಕಾರ ಮಾಡುತ್ತದೆ ಎನ್ನುವ ಆತಂಕವಿದೆ. ಯುವ ಸಮುದಾಯ ಓದುವ ಪ್ರವೃತ್ತಿಯಿಂದ ದೂರ ಉಳಿಯುತ್ತಿದೆ. ಯಾರೂ ಓದಿ ಎಂದು ಹೇಳುತ್ತಿಲ್ಲ. > ಸಿ.ಪುಟ್ಟಸ್ವಾಮಿ, ರೈತ ಮುಖಂಡ ರಾಜ್ಯದಲ್ಲಿ ಮಾವಿನ ಬೆಲೆ ಕುಸಿತ ಕಂಡಿದೆ. ಮಾವಿಗೆ ನೆರವು ನೀಡುವ ಸಂಬಂಧ ಮಾತನಾಡಲಾಗಿದೆ. ನಮ್ಮ ರಾಜ್ಯದಲ್ಲಿ ನೆರೆಯ ಆಂಧ್ರ ಪ್ರದೇಶಕ್ಕೆ ಹೋಲಿಸಿದೆ ಕಡಿಮೆ ಮಾವು ಸಂಸ್ಕರಣ ಘಟಕ ಇದೆ. ಪ್ರಸ್ತುತ 14&15 ಸಂಸ್ಕರಣ ಟಕ ಇದೆ. ಇವುಗಳನ್ನು 30ಕ್ಕೆ ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹಾಕಲಾಗುತ್ತದೆ. > ಸಿ.ಪಿ. ಯೋಗೇಶ್ವರ್​, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net