

ಹಿರಿಕರ ರವಿ ಸೋಮವಾರಪೇಟೆ
ವಾರ್ಷಿಕವಾಗಿ ಅತೀ ಹೆಚ್ಚು ಮಳೆ ಬೀಳುವ ತಾಲೂಕಿನ ಪುಷ್ಪಗಿರಿ ಬೆಟ್ಟದತಪ್ಪಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾಫಿ ಹಾಗೂ ಏಲಕ್ಕಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದರೆ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.
ಕಳೆದ ಮೇ ತಿಂಗಳಿನಿಂದಲೇ ಅಕಾಲಿಕ ಮಳೆ ಸುರಿದಿದೆ. ಜೂನ್ ತಿಂಗಳಿನಲ್ಲಿಯೂ ಮುಂಗಾರು ಮುಂದುವರಿದಿದೆ. ಜನವರಿಯಿಂದ ಇಲ್ಲಿಯವರೆಗೆ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ 100 ಇಂಚಿನಷ್ಟು ಮಳೆ ಸುರಿದಿದೆ ಎಂದು ಕೃಷಿಕರು ಹೇಳಿದರು. ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ಅತೀ ಶೀತದಿಂದ ಕೂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯೊಂದಿಗೆ ಬೀಸುವ ಭಾರೀ ಗಾಳಿಗೆ ಅಲ್ಲಲ್ಲಿ ಬೃಹತ್ ಮರಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ಅನೇಕ ಗ್ರಾಮಗಳು ಕತ್ತಲೆಯಲ್ಲಿವೆ.
ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಮಂಕ್ಯಾ, ಕುಂಬಾರಗಡಿಗೆ, ಕಿಕ್ಕರಳ್ಳಿ, ಸೂರ್ಲಬ್ಬಿ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೀಕಳ್ಳಿ, ನಡ್ಲಕೊಪ್ಪ, ಸಿಂಗನಹಳ್ಳಿ, ಹೆಮ್ಮನಗದ್ದೆ ಗ್ರಾಮಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭತ್ತದ ಸಸಿ ಮಡಿ ಮಳೆಯಲ್ಲಿ ಕೊಚ್ಚಿ ಹೋಗಿವೆ. ಭತ್ತದ ಭೂಮಿ ನೀರಿನಿಂದ ಆವೃತವಾಗಿದೆ.
ರೈತಾಪಿ ವರ್ಗ ಭತ್ತ ನಾಟಿಗಾಗಿ ಗದ್ದೆಗಳನ್ನು ಹದಗೊಳಿಸಿದ್ದು, ಸುರಿಯುತ್ತಿರುವ ಮಳೆ ಎಲ್ಲದಕ್ಕೂ ತಡೆಯೊಡ್ಡಿದೆ. ಇದರಿಂದಾಗಿ ನಾಟಿಕಾರ್ಯವೂ ವಿಳಂಬವಾಗುತ್ತಿದ್ದು ರೈತಾಪಿ ವರ್ಗದಲ್ಲಿ ಆತಂಕ ಮನೆಮಾಡಿದೆ. ತಾಲೂಕಿನ ಶನಿವಾರಸಂತೆ, ಸೋಮವಾರಪೇಟೆ, ಕೊಡ್ಲಿಪೇಟೆ ಹೋಬಳಿಯ ಗ್ರಾಮೀಣ ಭಾಗದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾಫಿ ತೋಟಗಳಲ್ಲಿನ ಮಣ್ಣು ಶೀತಗೊಂಡಿದ್ದು ಕೊಳೆರೋಗ ಬಾಧೆ ಕಾಣಿಸಿಕೊಂಡಿದೆ.
ಪ್ರಸಕ್ತ ವರ್ಷ ಇಲ್ಲಿಯವರೆಗೆ ಶಾಂತಳ್ಳಿಗೆ ಸರಾಸರಿ 80 ಇಂಚಿನಷ್ಟು ದಾಖಲೆಯ ಮಳೆಯಾಗಿದೆ. ಬೆಟ್ಟತಪ್ಪಲಿನ ಹೆಗ್ಗಡಮನೆ ಸುತ್ತಮುತ್ತಲ ಗ್ರಾಮಗಳಿಗೆ ಈಗಾಗಲೇ 100 ಇಂಚಿನಷ್ಟು ಮಳೆಯಾಗಿದ್ದು, ಭಾರೀ ಮಳೆಗೆ ಗ್ರಾಮವಾಸಿಗಳು ತತ್ತರಿಸಿದ್ದಾರೆ.
ಶಾಂತಳ್ಳಿ ಹೋಬಳಿಯಲ್ಲಿ ಕಳೆದ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆಗಮಿಸಿ ನಡುವೆ ಕೊಂಚ ಬಿಡುವು ನೀಡಿದ್ದರಿಂದ ಉತ್ತಮ ಕಾಫಿ ಫಸಲು ಕೈಸೇರಿತ್ತು. ಆದರೆ ಪ್ರಸಕ್ತ ವರ್ಷ ಬಿರುಗಾಳಿ ಸಹಿತ ಮಳೆ ಹಾಗೂ ಶೀತದಿಂದ ಭಾರೀ ನಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನೂ ತಳ್ಳಿಹಾಕುವಂತಿಲ್ಲ. ಇದೀಗ ಬಾಧಿಸುತ್ತಿರುವ ಕೊಳೆರೋಗದಿಂದ ಗಿಡಗಳಲ್ಲಿ ಕಾಫಿ ಎಲೆಗಳು ಕೊಳೆಯುತ್ತಿದ್ದು, ಕಾಫಿ ಕಾಯಿ ಉದುರುತ್ತಿವೆ.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಣ್ಣಪುಟ್ಟ ನದಿತೊರೆಗಳು ತುಂಬಿಹರಿಯುತ್ತಿದ್ದು, ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನಿಂದ ದುರ್ಗಾಪರಮೇಶ್ವರಿ ಎಸ್ಟೇಟ್ ಕಡೆಗೆ ತೆರಳುವ ರಸ್ತೆಯಲ್ಲಿ ಮೋರಿ ಮತ್ತು ತಡೆಗೋಡೆ ಕುಸಿದಿದ್ದು, ಈಗ ರಸ್ತೆಯೂ ಭೀತಿ ಎದುರಾಗಿದೆ. ತಾಲೂಕಿನ ದೊಡ್ಡಕುಂದ ಗ್ರಾಮದಲ್ಲಿ ಮಾವಿನ ಮರ ರಸ್ತೆಗಟ್ಟಲಾಗಿ ಬಿದ್ದಿದೆ. ಗ್ರಾಮೀಣ ಭಾಗದಲ್ಲಿ ಮರಗಳು ನೆಲಕ್ಕುರುಳುತ್ತಿವೆ. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಲು ಬೆರಳಣಿಕೆಯ ಸೆಸ್ಕ್ ಸಿಬ್ಬಂದಿಗಳು ಪರದಾಡುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 1143.99 ಮಿಲಿ.ಮೀಟರ್ ಆಗಿದೆ. ಕಳೆದ ವರ್ಷ ಇದೇ ಅವಧಿಗೆ 453.46 ಮಿ.ಮೀ ಮಳೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಹೋಬಳಿಗೆ 75ಮಿ.ಮೀ., ಶನಿವಾರಸಂತೆ 53, ಕೊಡ್ಲಿಪೇಟೆ 51 ಮಳೆಯಾಗಿದೆ.