ಮಳೆಯಿಲ್ಲದೆ ಬಿತ್ತನೆ ವಿಳಂಬ

Agriculture
ನೀರಿಲ್ಲದೆ ಒಣಗಿರುವ ಭತ್ತದ ಗದ್ದೆ.
Published on

-ನರೇಂದ್ರ ಎಸ್.ಮರಸಣಿಗೆ, ಹೆಬ್ರಿ

ಉಡುಪಿ ಜಿಲ್ಲೆಯಾದ್ಯಂತ ಶೇ.73 ಮಳೆ ಕೊರತೆ ಆಗಿರುವುದರಿಂದ ಕೃಷಿ ಕಾರ್ಯಗಳು ಇನ್ನೂ ಆರಂಭವಾಗಿಲ್ಲ. ನೀರಿನ ಸಮಸ್ಯೆಯಿಂದ ಬಿತ್ತನೆ ಕೆಲಸ ಇನ್ನೂ ಮುಂದೆ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಜೂನ್ 13ರ ತನಕ 500 ಮಿ.ಮೀ.ಗಿಂತ ಹೆಚ್ಚು ಮಳೆ ಆಗಬೇಕಾಗಿತ್ತು. ಆದರೆ 146 ಮಿ.ಮೀ ಮಾತ್ರ ಮಳೆಯಾಗಿದ್ದು ಕೃಷಿಗೆ ಸಮಸ್ಯೆ ಎದುರಾಗಿದೆ.

ಬಿತ್ತನೆ ವಿಳಂಬ

ಬಹುತೇಕ ರೈತರು ಪ್ರತಿ ವರ್ಷ ಜೂನ್ 20ರವರೆಗೆ ನಾಟಿಕಾರ್ಯ ಮಾಡುತ್ತಿದ್ದರು. ನೀರಿಲ್ಲದೆ ಬಿತ್ತನೆ ಬಹಳ ತಡವಾಗುತ್ತಿದೆ. ಈ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ 38 ಸಾವಿರ ಹೆಕ್ಟರ್ ಪ್ರದೇಶ ಬಿತ್ತನೆ ಗುರಿಯಿದೆ. ಕಳೆದ ವರ್ಷ 36 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿ ಬಹುತೇಕ ಯಶಸ್ಸು ಸಾಧಿಸಲಾಗಿದೆ. ಈ ವರ್ಷ ಕೃಷಿ ಇಲಾಖೆಯಲ್ಲಿ ಜಿಲ್ಲೆಗೆ 2500 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇಡಲಾಗಿದೆ. 2063 ಕ್ವಿಂಟಾಲ್ ಬೀಜ ದಾಸ್ತನಾಗಿದ್ದು, 1681 ಕ್ವಿಂಟಾಲ್ ಮಾರಾಟವಾಗಿ, 331 ಕ್ವಿಂಟಾಲ್ ಉಳಿಕೆಯಾಗಿ ಮಾರಾಟಕ್ಕೆ ಲಭ್ಯವಿದೆ.

ಹೆಚ್ಚುತ್ತಿದೆ ಹಡಿಲು ಭೂಮಿ

ಹಡಿಲು ಭೂಮಿ ಹೆಚ್ಚಾಗುತ್ತಿದ್ದು, ವರ್ಷದಲ್ಲಿ ಎರಡು ಬೆಳೆ ಬೆಳೆಯುತ್ತಿದ್ದವರು ಒಂದು ಬೆಳೆ ಬೆಳೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಲವು ರೈತರು ನಷ್ಟವಾಗುತ್ತದೆ ಎಂದು ಭತ್ತದ ಕೃಷಿ ತೊರೆದಿದ್ದಾರೆ.

ಅಲ್ಪಾವಧಿ ತಳಿಗೆ ಸಲಹೆ

ಬಿತ್ತನೆ ಕಾರ್ಯ ತಡವಾಗುತ್ತಿರುವುದರಿಂದ, ಎರಡನೇ ಬೆಳೆ ಬೆಳೆಯುವವರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ನೂರು ದಿನದಲ್ಲಿ ಇಳುವರಿ ಕೊಡುವ ಜ್ಯೋತಿ ಹಾಗೂ ಉಮಾ ತಳಿ ಬೆಳೆಯಲು ಕೃಷಿ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬೆಳೆಗಳು ನೂರು ದಿನದಲ್ಲಿ ಫಸಲು ನೀಡುತ್ತವೆ.

ಮ್ಯಾಟ್ ಅಗೆ ಮಾಡಿದ್ದವರಿಗೆ ಸಮಸ್ಯೆ

ಬಹುತೇಕರು ಮ್ಯಾಟ್ ಆಗೆಯನ್ನು ಮಾಡಿ ಕೃಷಿ ಮಾಡುವ ಇರಾದೆ ಹೊಂದಿದ್ದರು. ಈ ಅಗೆಯೂ 15ರಿಂದ 20 ದಿನಗಳು ದಾಟಿದರೆ ಕೆಂಪಾಗುತ್ತದೆ. ಇದರಲ್ಲಿ 3/4 ರಷ್ಟು ಸಣ್ಣ ಪ್ರಮಾಣದಲ್ಲಿ ಮಣ್ಣು ಹಾಗೂ ಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡಿ ಬೀಜ ಹರಡಲಾಗುತ್ತದೆ. ದಿನ ಹೆಚ್ಚಾದಂತೆ ಒತ್ತಡ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಸಹ್ಯಾದ್ರಿ ಪಂಚಮುಖಿ ಬೆಳೆಯಲು ಸೂಚನೆ

ಜಿಲ್ಲೆಯ ಕೆಲವೆಡೆ ಪ್ರವಾಹದ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ರೈತರು ಸಹ್ಯಾದ್ರಿ ಪಂಚಮುಖಿ ಬೆಳೆ ಬೆಳೆಯುವುದರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸುಮಾರು ಏಳು ದಿನಗಳ ಕಾಲ ಪ್ರವಾಹದ ನೀರು ನಿಂತರೂ ಈ ಬೆಳೆಗೆ ಹಾನಿ ಆಗುವುದಿಲ್ಲ.

ಸಹ್ಯಾದ್ರಿ ಬ್ರಹ್ಮ ನೂತನ ತಳಿ

ಎಂಒ4(ಭದ್ರ) ತಳಿಯ ಬದಲಾಗಿ ನೂತನ ಸಹ್ಯಾದ್ರಿ ಬ್ರಹ್ಮ ತಳಿಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಮಾಡಿದೆ. ಎಂಒ4(ಭದ್ರ) ತಳಿ ಹಳೆಯದಾಗಿದೆ ಮತ್ತು ಇಳುವರಿ ಸಾಮರ್ಥ್ಯ ಕಡಿಮೆ ಆಗಿರುವ ಕಾರಣ ನೂತನ ತಳಿಯನ್ನು ಅಭಿವೃದ್ಧಿ ಮಾಡಲಾಗಿದೆ. ಮಜಲು, ಬೆಟ್ಟು, ಬೈಲು ಪ್ರದೇಶಗಳಲ್ಲಿ ಸಹ್ಯಾದ್ರಿ ಬ್ರಹ್ಮವನ್ನು ಬೆಳೆದರೆ ಉತ್ತಮ ಇಳುವರಿ ನೀಡುತ್ತದೆ.

ಕೃಷಿಗೆ ನೂರಾರು ಸಮಸ್ಯೆ

ದಿನದಿಂದ ದಿನಕ್ಕೆ ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಾಗುತ್ತಿದ್ದರೂ ಲಭ್ಯತೆ ಕಡಿಮೆ ಇದೆ. ಸಂಬಳ ಕೂಡ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿದೆ. ಯಾಂತ್ರೀಕೃತ ಕೃಷಿ ಮಾಡುವಲ್ಲಿ ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೃಷಿಗೆ ಸವಾಲು.

ಮಳೆ ಇಲ್ಲದೆ ಈ ವರ್ಷ ಭತ್ತದ ಬೆಳೆಗೆ ಹಿನ್ನಡೆಯಾಗಲಿದೆ. ಪ್ರವಾಹ, ಕಾಡು ಪ್ರಾಣಿಗಳ ಹಾವಳಿ, ಬೆಲೆ ಏರಿಕೆಯಿಂದ ರೈತ ತತ್ತರಿಸಿದ್ದಾನೆ. ದಿನ ಹೋದಂತೆ ಹಡಿಲು ಭೂಮಿ ಪ್ರಮಾಣ ಹೆಚ್ಚಾಗುತ್ತಿದೆ. ಆದಾಯಕ್ಕಿಂತ ನಷ್ಟವೇ ಹೆಚ್ಚಿದ್ದು ನಮ್ಮ ಸಮಸ್ಯೆ ಕೇಳುವವರು ಯಾರು? ಹಡಿಲು ಭೂಮಿ ಕೃಷಿ ಮಾಡುವವರಿಗೆ ಸರ್ಕಾರ ಉತ್ತೇಜನ ನೀಡಬೇಕು.-ಮುನಿಯಾಲು ಗೋಪಾಲ ಕುಲಾಲ್, ಅಧ್ಯಕ್ಷರು ಉಡುಪಿ ಜಿಲ್ಲಾ ರೈತ ಸಂಘ

ರೈತರು ಹೆಚ್ಚುವರಿ ಇಳುವರಿ ಪಡೆಯಲು ಸಹ್ಯಾದ್ರಿ ಬ್ರಹ್ಮ, ಪ್ರವಾಹವಾಗುವ ಸ್ಥಳದಲ್ಲಿ ಸಹ್ಯಾದ್ರಿ ಪಂಚಮುಖಿ ತಳಿಯನ್ನು ಬೆಳೆಸಿದರೆ ಉತ್ತಮ ಲಾಭ ಪಡೆಯಬಹುದು. ಎಂಒ4(ಭದ್ರ) ಹಳೆಯದಾಗಿದ್ದು ಇಳುವರಿ ಕಡಿಮೆಯಾಗಿದೆ. ಎಂಒ4(ಭದ್ರ ) ಮಜಲು, ಬೆಟ್ಟು ಹಾಗೂ ಬಯಲು ಪ್ರದೇಶಗಳಲ್ಲೂ ಬೆಳೆಯಬಹುದು. ರೈತರು ಕೃಷಿಯಲ್ಲಿ ನೂತನ ಪ್ರಯೋಗ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ.-ಡಾ. ಧನಂಜಯ, ಹಿರಿಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

ಮುಂಗಾರು ಕೊರತೆಯಿಂದಾಗಿ ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ರೈತರು ಸಮಯಕ್ಕೆ ಹೊಂದಿಕೊಳ್ಳಲು ಅಲ್ಪಾವಧಿ ಪಸಲು ಕೊಡುವ ತಳಿಗಳಾದ ಜ್ಯೋತಿ ಹಾಗೂ ಉಮಾ ಬಿತ್ತನೆ ಮಾಡಿದರೆ 100 ದಿನದಲ್ಲಿ ಇಳುವರಿ ಪಡೆಯಬಹುದು. ರೈತರು ಸಂದರ್ಭಕ್ಕೆ ತಕ್ಕಂತೆ ಕೃಷಿ ಮಾಡಿ ಲಾಭ ಪಡೆಯಬಹುದು.-ಸೀತಾ ಎಂ.ಸಿ.,ಜಂಟಿ ಕೃಷಿ ನಿರ್ದೇಶಕರು, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net