

ಶ್ರವಣ್ಕುಮಾರ್ ನಾಳ ಮಂಗಳೂರು
ರಾಜ್ಯದ ಪಶ್ಷಿಮ ಕರಾವಳಿ ಭಾಗದ ಬಹು ನಿರೀಕ್ಷಿತ ಹಾಗೂ ಅಗತ್ಯ ಯೋಜನಾ ಅನುಷ್ಠಾನಕ್ಕೆ ಅಗತ್ಯವಿದ್ದ ಹೊಸ ಸಿಆರ್ಜಡ್(ಕರಾವಳಿ ನಿಯಂತ್ರಣ ವಲಯ) ನಕ್ಷೆ ಅನುಮೋದನೆಗೊಂಡಿದೆ.
ಇತ್ತೀಚೆಗೆ ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಕರಾವಳಿ ಭಾಗದ ಸಿಆರ್ಜಡ್ ಸರ್ವೇ ಮಾರ್ಕ್ ಹಾಗೂ ಮ್ಯಾಪ್ಗೆ ಚೆನ್ನೈನ ಸುಸ್ಥಿರ ಕರಾವಳಿ ನಿರ್ವಹಣಾ ರಾಷ್ಟ್ರೀಯ ಕೇಂದ್ರದ (ಎನ್ಸಿಎಸ್ಸಿಎಂ) ಅನುಮೋದನೆ ದೊರಕಿದ್ದು, ಮಂಗಳೂರು, ಉಡುಪಿ ಹಾಗೂ ಕಾರವಾರವರೆಗಿನ ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಬೀಚ್ ಟೂರಿಸಂ ಸಹಿತ ಕರಾವಳಿ ವಲಯದ ವಿವಿಧ ನಿರ್ವಹಣಾ ಯೋಜನೆಗೆ ಮರುಜೀವ ದೊರಕಿದೆ.
ಕಡಲ ತೀರ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಸಹಿತ ಸಣ್ಣ ಪುಟ್ಟ ನಿರ್ಮಾಣ ಕಾಮಗಾರಿಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಅದಕ್ಕೂ ಮಿಗಿಲಾದ ಕಾಮಗಾರಿಗೆ ಸಿಆರ್ಜಡ್ ಬೆಂಗಳೂರು ಕೇಂದ್ರ ಕಚೇರಿಯ ಅನುಮೋದನೆ ಬೇಕಾಗುತ್ತದೆ. ಪ್ರವಾಸೋದ್ಯಮ, ಸೇತುವೆ ನಿರ್ಮಾಣ, ಕೈಗಾರಿಕೆ ಸ್ಥಾಪನೆ, ಉದ್ಯಮ ಸ್ಥಾಪನೆ ಸಹಿತ ವಿವಿಧ ಸಂದರ್ಭ ಸಿಆರ್ಜಡ್ ಅನುಮೋದನೆಗೂ ಮುನ್ನ ಚೆನ್ನೈ ಕಚೇರಿಯಲ್ಲಿ ಮ್ಯಾಪ್ ಅಂತಿಮ ಮಾಡಬೇಕಾಗುತ್ತದೆ.
ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಕರಾವಳಿ 320 ಕಿ.ಮೀ. ವಿಶಾಲವಾಗಿದ್ದರೂ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ತಾಂತ್ರಿಕ ತೊಡಕಾಗಿತ್ತು. ಬೀಚ್ ರೆಸಾರ್ಟ್, ಬೀಚ್ ಹೋಟೆಲ್, ನೈಟ್ಕ್ಲಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಸಾಕಷ್ಟು ಅವಕಾಶವಿದ್ದರೂ ನಿಯಮಗಳಿಂದಾಗಿ ಸಾಧ್ಯವಿರಲಿಲ್ಲ. ಪ್ರಸ್ತುತ ಈ ಸಮಸ್ಯೆಗೆ ಮುಕ್ತಿ ದೊರಕುವ ಸಮಯ ಹತ್ತಿರವಾಗಿದ್ದು, ಕರಾವಳಿ ಬೀಚ್ ಟೂರಿಸಂ ಚೇತರಿಕೆ ನಿರೀಕ್ಷೆ ಇದೆ. ಈಗಾಗಲೇ ಸ್ಥಳೀಯ, ರಾಜ್ಯ ಹಾಗೂ ಹೊರರಾಜ್ಯದ ಸಂಸ್ಥೆ ಕರಾವಳಿ ವಲಯದ ವಿವಿಧ ನಿರ್ವಹಣಾ ಯೋಜನೆಗೆ ಹೂಡಿಕೆಗೆ ನಿರ್ಧರಿಸಿದ್ದು, ಕರಾವಳಿ ಬೀಚ್ ಪ್ರವಾಸೋದ್ಯಮ ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿದೆ.
ರಾಜ್ಯದ 320 ಕಿ.ಮೀ.ವ್ಯಾಪ್ತಿಯ ಪ್ರತಿ ಗ್ರಾಮದ ಪ್ರತ್ಯೇಕ ಜಿಯೋ ರೆರಿಂಗ್ ದೊಡ್ಡ ಕಾರ್ಯ. ಈ ಕಾರ್ಯ ರಾಜ್ಯ ಸರ್ಕಾರದ ಕಂದಾಯ ಇಲಾಖೆ, ಭೂ ಸರ್ವೇ ವಿಭಾಗ ಮಾಡಬೇಕಿದ್ದು, ಇಲಾಖೆ ಮಧ್ಯೆ ಸಂವಹನ ಕೊರತೆ ಇದೆ. ಜತೆಗೆ ಹೂಡಿಕೆದಾರರಿಗೆ ಪ್ರತ್ಯೇಕ ಸಿಆರ್ಜಡ್ ಸರ್ವೇ, ಮಾರ್ಕ್ ಮಾಡುವುದು ಹಾಗೂ ಮ್ಯಾಪ್ ರಚನೆಗೆ ಚೆನ್ನೈ ಅಲೆದಾಟ ತಪ್ಪಿಸುವ ಸಲುವಾಗಿ ಕರಾವಳಿಯಲ್ಲೇ ಕೇಂದ್ರ ತೆರೆಯಲು ಉನ್ನತ ಮಟ್ಟದ ಅಧಿಕಾರಿಗಳ ತಂಡ ಪರಾಮರ್ಶೆ ನಡೆಸಿದೆ. ಎನ್ಐಟಿಕೆ ಹಾಗೂ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಮುಖೇನ ಮಂಗಳೂರಿನಲ್ಲಿಯೇ ಎನ್ಸಿಎಸ್ಸಿಎಂ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಇದು ಜಾರಿಯಾದರೆ ಬೀಚ್ ಸಮೀಪ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಸೇರಿದಂತೆ ದೊಡ್ಡ ಯೋಜನೆ ಜಾರಿಗೆ ಅವಶ್ಯಕತೆಯಿರುವ ಸಿಆರ್ಜಡ್ ಸರ್ವೇ, ಮಾರ್ಕ್ ಮಾಡುವುದು ಹಾಗೂ ಮ್ಯಾಪ್ ಮಾಡಿಕೊಡಲು ಅಧ್ಯಯನ ತಂಡ ಮಂಗಳೂರಿನಲ್ಲಿಯೇ ಇರಲಿದ್ದು, ಸುಲಭ, ಕಡಿಮೆ ಅವಧಿಯಲ್ಲಿ ಮ್ಯಾಪ್ ಪಡೆಯಬಹುದು.
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ನದಿಪಾತ್ರದ 50 ಮೀ. ಮಾತ್ರ ಸಿಆರ್ಜಡ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಹಿಂದೆ ಇದು 100 ಮೀಟರ್ಗಿತ್ತು. ಸಮುದ್ರ ವ್ಯಾಪ್ತಿಯನ್ನು ಈ ಹಿಂದಿನಂತೆ 500 ಮೀ.ಗೆ ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ. ಬೀಚ್ ವ್ಯಾಪ್ತಿಯು ನಗರ, ಮಹಾನಗರ, ಪಟ್ಟಣ ಪಂಚಾಯಿತಿ, ನಗರಪಾಲಿಕೆಗಳಿದ್ದರೆ ಹೆಚ್ಚಿನ ವಿನಾಯಿತಿ ಸಿಕ್ಕಿದೆ. ಅಭಿವೃದ್ಧಿ ಹೊಂದುತ್ತಿರುವ, ಅಭಿವೃದ್ಧಿ ಹೊಂದಿದ ಬೀಚ್ಗಳಲ್ಲಿ ಮಳೆಗಾಲ ಹೊರತುಪಡಿಸಿ ಉಳಿದ ಸಂದರ್ಭ ಬೀಚ್ನ 10 ಮೀ. ದೂರದಲ್ಲಿ ಹಟ್, ಫುಡ್ ಕಾರ್ನರ್ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲು ಅನುಮತಿಸಲಾಗಿದೆ.
ಹೊಸ ಸಿಆರ್ಜಡ್ ನಕ್ಷೆಗೆ ಚೆನ್ನೈನ ಸುಸ್ಥಿರ ಕರಾವಳಿ ನಿರ್ವಹಣಾ ರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ಘಟಕದಿಂದ ಅನುಮೋದನೆ ದೊರಕಿದೆ. ಈ ಹಿಂದೆ ಇದ್ದ ಹಲವು ನಿಯಮಗಳು ಸಡಿಲಿಕೆಗೊಂಡಿದ್ದರಿಂದ ಬೀಚ್ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.- ಡಾ.ದಿನೇಶ್ ಕುಮಾರ್ ವೈ.ಕೆ., ಉಪಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು