

ಧನಂಜಯ ಗುರುಪುರ
ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗಾಗಿ ಬಂಟ್ವಾಳ ತಾಲೂಕು ವ್ಯಾಪ್ತಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕರಿಯಂಗಳ ಗ್ರಾಪಂ ವ್ಯಾಪ್ತಿಯ ಕಲ್ಕುಟ ಎಂಬಲ್ಲಿ ‘ಕುಲ’ ಎನ್ನುವ ಬೃಹತ್ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದ್ದು, ಪ್ರಸ್ತುತ ಕೆರೆಗೆ ಕಲ್ಲು ಹಾಸುವ ಕಾಮಗಾರಿ ನಡೆಯುತ್ತಿದೆ. ಕೆರೆಯ ಇನ್ನುಳಿದ ಅಭಿವೃದ್ಧಿ ಕಾರ್ಯ ಪಂಚಾಯಿತಿಯಿಂದ ನಡೆಯಲಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಸುಮಾರು 600 ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಈಗಾಗಲೇ ಪೂರ್ಣಗೊಂಡಿದ್ದರೆ, ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಕೆರೆ ಮತ್ತು ಉಡುಪಿ ಜಿಲ್ಲೆಯಲ್ಲಿ 17 ಕೆರೆಗಳ ಹೂಳೆತ್ತುವ ಕಾರ್ಯ ನಡೆಯುತ್ತಿದೆ. 9 ಲಕ್ಷ ರೂ ವೆಚ್ಚದಲ್ಲಿ ಕುಲ ಕೆರೆಯ ಹೂಳೆತ್ತಲು ಯೋಜನೆ ರೂಪಿಸಲಾಗಿದ್ದರೂ, ಇದುವರೆಗೆ 7 ಲಕ್ಷ ರೂ. ಖರ್ಚಾಗಿದೆ.
7 ಎಕರೆ ಜಾಗದಲ್ಲಿ ವಿಸ್ತರಿಸಿಕೊಂಡಿರುವ ಕುಲಕೆರೆಯಲ್ಲಿ ನೀರಿನ ಆಶ್ರಯದ 3 ಎಕರೆ ಜಾಗದಲ್ಲಿ ಸುಮಾರು ಮೂರೂವರೆ ಅಡಿ ಆಳಕ್ಕೆ ಹೂಳೆತ್ತಲಾಗಿದೆ. ಮಳೆಗಾಲದಲ್ಲಿ ಕೆರೆ ತುಂಬಿ ಅಂತರ್ಜಲ ವೃದ್ಧಿಯಾಗಲಿದ್ದು, ಬೇಸಿಗೆಯಲ್ಲಿ ಸುತ್ತಲ ಜನವಸತಿ ಪ್ರದೇಶದ ಬಹುತೇಕ ಎಲ್ಲ ಬಾವಿ, ಕೆರೆಕಟ್ಟೆಗಳಲ್ಲಿ ನೀರು ಲಭಿಸಲಿದೆ. ಕೃಷಿಗೂ ನೀರು ಬಳಕೆ ಮಾಡಬಹುದು. ಮಳೆ ಆರಂಭಕ್ಕೆ ಮುನ್ನ ಕೆರೆಗೆ ಕಲ್ಲು ಹಾಸು ಕಾಮಗಾರಿ ಪೂರ್ಣಗೊಳ್ಳಲಿದೆ.
ಪಂಚಾಯಿತಿಯಿಂದ ಉದ್ಯಾನ, ಬೋಟಿಂಗ್ ಅಭಿವೃದ್ಧಿ
ಹೂಳೆತ್ತಲಾದ ಕೆರೆಯ ಸುತ್ತ ಉದ್ಯಾನ, ರಸ್ತೆ, ವಾಹನ ಪಾರ್ಕಿಂಗ್ ವ್ಯವಸ್ಥೆ ರೂಪುಗೊಳ್ಳಲಿದೆ. ಕೆರೆಯ ಸುತ್ತಲ ಪ್ರದೇಶದಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಉದ್ಯಾನ, ದೀಪಗಳ ಅಳವಡಿಕೆ ಹಾಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಪಂಚಾಯಿತಿ ಯೋಚಿಸಿದೆ.
ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘಟಕವು ಕಲ್ಕುಟ ಕುಲ ಕೆರೆಯ ಹೂಳೆತ್ತುವ ಕಾರ್ಯ ನಡೆಸಿದೆ. ಪಂಚಾಯಿತಿ ವತಿಯಿಂದ ಸರ್ಕಾರದ ಅಮೃತ ಯೋಜನೆಯಡಿ ಕೆರೆಯ ನಿರ್ವಹಣೆ ಜತೆಗೆ ಇನ್ನುಳಿದ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ಉದ್ಯೋಗ ಖಾತ್ರಿ ಯೋಜನೆಯ 39 ಲಕ್ಷ ರೂ. ವೆಚ್ಚದಲ್ಲಿ ಕೆರೆ ಸುತ್ತ ಕಪ್ಪು ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ಶೀಘ್ರ ಈ ಕೆಲಸವೂ ಪೂರ್ಣಗೊಳ್ಳಲಿದೆ. ಕೆರೆಯ ಇನ್ನುಳಿದ ಅಭಿವೃದ್ಧಿ ಕಾರ್ಯಕ್ಕೆ ಎಂಆರ್‌ಪಿಎಲ್, ಶಾಸಕರು, ಸರ್ಕಾರ, ಊರಿನ ದಾನಿಗಳು, ಬ್ಯಾಂಕ್ ಆಫ್ ಬರೋಡ, ಪೊಳಲಿ ರಾಮಕೃಷ್ಣ ತಪೋವನದ ನೆರವು ಯಾಚಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ‘ನಮ್ಮೂರ ಕೆರೆ’ಯಾಗಿ ಮಾದರಿ ಕೆರೆಯನ್ನಾಗಿಸುವ ಉದ್ದೇಶ ಪಂಚಾಯಿತಿಗೆ ಇದೆ. ಪ್ರವಾಸೋದ್ಯಮಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗಿದೆ.-ಚಂದ್ರಹಾಸ ಪಲ್ಲಿಪಾಡಿ, ಕರಿಯಂಗಳ ಪಂಚಾಯಿತಿ ಅಧ್ಯಕ್ಷ
ಬೇಸಿಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ಇದೆ ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆಗಳ ಹೂಳೆತ್ತಿ ಪರಿಸರದಲ್ಲಿ ಅಂತರ್ಜಲ ವೃದ್ಧಿಸುವ ಯೋಜನೆ ರೂಪಿಸಲಾಗಿದೆ. ಕೆರೆಯ ಮಧ್ಯದಲ್ಲಿ 50*25 ಅಡಿ ಜಾಗದಲ್ಲಿ ಮೂರಡಿ ಮಣ್ಣು ತೆಗೆದು ಹೆಚ್ಚು ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಕೆಲಸಕ್ಕೆ 7 ಲಕ್ಷ ರೂ. ವ್ಯಯಿಸಲಾಗಿದೆ. ನಿರ್ವಹಣೆಯೊಂದಿಗೆ ಇನ್ನುಳಿದ ಕೆಲಸಗಳು ಪಂಚಾಯಿತಿ ವತಿಯಿಂದ ನಡೆಯಲಿವೆ.-ಮಾಧವ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ https://www.vijayavani.net/farmers-helped-pavoor-village-by-providing-water-meant-for-their-plantations