

* ಜಿಲ್ಲೆಯಲ್ಲಿ ಚುರುಕಾದ ಕೃಷಿ ಚಟುವಟಿಕೆ
* ಸರ್ಕಾರದ ಸೌಲಭ್ಯದ ಸದುಪಯೋಗಕ್ಕೆ ಮನವಿ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಪೂರೈಕೆ ಮಾಡಲು ಕೃಷಿ ಇಲಾಖೆ ಸಜ್ಜುಗೊಂಡಿದೆ.
ಜಿಲ್ಲೆಯ ಪ್ರಮುಖ ಬೆಳೆಯಲ್ಲಿ ರಾಗಿ ಒಂದಾಗಿದೆ. ಜತೆಗೆ ಜೋಳ, ತೊಗರಿ, ಹಲಸಂದೆ ಬೆಳೆಗಳನ್ನು ಸಾಲುಬೆಳೆಯಾಗಿ ಬೆಳೆಯುತ್ತಾರೆ. ಗುಣಮಟ್ಟದ ಬೀಜ ಬಿತ್ತನೆ ಹಾಗೂ ಆಧುನಿಕ ಬೇಸಾಯ ಪದ್ಧತಿ ಅನುಸರಿಸಿ ರೈತರು ಹೆಚ್ಚಿನ ಲಾಭಗಳಿಸುವಂತೆ ಪ್ರೋತ್ಸಾಹಿಸಲು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಔಷಧ, ಕೃಷಿ ಉಪಕರಣ ವಿತರಿಸಲು ಸನ್ನದ್ಧವಾಗಿದೆ.
ಪ್ರಸ್ತುತ ಮುಂಗಾರು ಪೂರ್ವ ಬೆಳೆಯಾಗಿ ರೈತರು ಹಲಸಂದೆ, ಜೋಳ ಬಿತ್ತನೆ ಮಾಡಿದ್ದಾರೆ. ರಾಮನಗರ ತಾಲೂಕಿನ ಕಸಬಾ, ಕೈಲಾಂಚ, ಬಿಡದಿ, ಕೂಟಗಲ್ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಾಗಿ ಬೇಕಾದ ರಾಗಿ, ಜೋಳ, ತೊಗರಿ, ಹಲಸಂದೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣ ದಾಸ್ತಾನು ಮಾಡಿದ್ದು, ರೈತರಿಗೆ ಸರ್ಕಾರದ ಸಹಾಯಧನದಲ್ಲಿ ವಿತರಣೆ ಮಾಡುತ್ತಿದೆ. ದೃಢೀಕೃತ ಬಿತ್ತನೆ ಬೀಜ ಮತ್ತು ಕೃಷಿ ಸಲಕರಣೆ ಪಡೆಯಬೇಕೆಂದು ಕೃಷಿ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ರಾಗಿ ಎಂ.ಆರ್. 1, ಎಂ.ಆರ್. 6, ಜಿಪಿಯು 28, ಎಂ.ಎಲ್. 365 ಲಭ್ಯವಿದ್ದು, 5 ಕೆಜಿ ಬ್ಯಾಗ್‌ನಲ್ಲಿ ರಿಯಾಯಿತಿ ದರದಲ್ಲಿ ಸಾಮಾನ್ಯ ರೈತರಿಗೆ 235 ರೂ, ಎಸ್ಸಿ-ಎಸ್ಟಿ ರೈತರಿಗೆ 190 ರೂ. ಹಲಸಂದೆ ಡಿಸಿ 15 ಲಭ್ಯವಿದ್ದು, 5 ಕೆ.ಜಿ. ಬ್ಯಾಗ್‌ನಲ್ಲಿ ಸಾಮಾನ್ಯ ರೈತರಿಗೆ 525 ರೂ, ಎಸ್ಸಿ-ಎಸ್ಟಿ ರೈತರಿಗೆ 462.50 ರೂ. ತೊಗರಿ- ಬಿಆರ್‌ಜಿ -1, 5 ಕೆ.ಜಿ. ಬ್ಯಾಗ್‌ನಲ್ಲಿ ಸಾಮಾನ್ಯ ರೈತರಿಗೆ 610 ರೂ, ಎಸ್ಸಿ-ಎಸ್ಟಿ ರೈತರಿಗೆ 547.50 ರೂ. ಬಿಆರ್‌ಜಿ-3, ಬಿಆರ್‌ಜಿ-5, 5 ಕೆ.ಜಿ. ಬ್ಯಾಗ್‌ನಲ್ಲಿ ಸಾಮಾನ್ಯ ರೈತರಿಗೆ 600 ರೂ, ಎಸ್ಸಿ-ಎಸ್ಟಿ ರೈತರಿಗೆ 537.50 ರೂ. ಭತ್ತ ಆರ್‌ಎನ್‌ಆರ್ 15048, 25 ಕೆಜಿ ಬ್ಯಾಗ್‌ನಲ್ಲಿ ಲಭ್ಯವಿದ್ದು, ಸಾಮಾನ್ಯ ರೈತರಿಗೆ 1337.5 ರೂ, ಎಸ್ಸಿ-ಎಸ್ಟಿ ರೈತರಿಗೆ 1237.5 ರೂ. ಔಷಧಗಳು ಕ್ಲೋರೋಪೈರಿಪಾಸ್ 1 ಲೀ. 442.50, ಅಜಾಡಿರೆಕ್ಟಿನ್ 1 ಲೀ. 255 ರೂ, ಎಮಾಮೆಕ್ಟಿನ್ ಬೆಂಜೋಯೆಟ್ 100 ಗ್ರಾಂ. 127.5, ಕಾರ್ಬಂಡೈಜಿಯಮ್ ಮತ್ತು ಮ್ಯಾಂಕೋಜೆಬ್ 0.5 ಕೆ.ಜಿ 179 ರೂ. ಕಾರ್ಬನ್‌ಡೈಜಿಮ್ 0.5 ಕೆಜಿ. 179 ರೂನಲ್ಲಿ ಲಭ್ಯವಿದೆ.
ಸೈಕಲ್ ವೀಡರ್ 2050, ಕೂಪರ್ ನೇಗಿಲು ಸಾಮಾನ್ಯ ಮತ್ತು ಎಸ್ಸಿ ಎಸ್ಟಿ ರೈತರಿಗೆ ಸರ್ಕಾರದ ಸಹಾಯಧನದಲ್ಲಿ ದೊಡ್ಡ ನೇಗಿಲು 1835, ಒಂಟಿ ರೆಕ್ಕೆ ನೇಗಿಲು 1375, ಹಲುಬೆ 1920 ರೂ, ಹ್ಯಾಂಡ್ ವೀಡರ್ ಸಾಮಾನ್ಯ ರೈತರಿಗೆ 290, ಪಜಾತಿ. ಪ. ಪಂಗಡ ರೈತರಿಗೆ 125 ರೂ. ನಲ್ಲಿ ಲಭ್ಯವಿದೆ. ಅಬ್ಬ ಸೆಣಬು, ದಯಾಂಚ, ಶೇಂಗಾ (ಕಡಲೆಕಾಯಿ ಬೀಜ) ಬ್ಯಾಟರಿ ಚಾಲಿತ ಔಷಧ ಸಿಂಪಡಣೆ ಯಂತ್ರ, ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಜಿಪ್ಸಂಗೆ ರೈತರು ಬೇಡಿಕೆ ಇಟ್ಟಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳ ಶೇ.90 ರಿಯಾಯಿತಿ ಪ್ರಯೋಜನೆ ಪಡೆಯಲು ಸಮೀಪದ ರೈತ ಸಂಪರ್ಕಗಳಲ್ಲಿ ಅರ್ಜಿ ಮತ್ತು ಆಧಾರ್, ಪಹಣಿ, ನೀರಿನ ಹಕ್ಕಿನ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ. ಜತೆಗೆ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಮಿನಿ ಟ್ರ್ಯ್ರಾಕ್ಟರ್, ಟಿಲ್ಲರ್, ಕಲ್ಟಿವೇಟರ್ ಪವರ್ ವೀಡರ್, ಬ್ರಷ್ ಕಟರ್, ಚಾಪ್ ಕಟರ್ ಯಂತ್ರಗಳನ್ನು ಸಾಮಾನ್ಯ ವರ್ಗಕ್ಕೆ ಶೇ.50 ಪ.ಜಾತಿ ಮತ್ತು ಪ. ಪಂಗಡ ರೈತರಿಗೆ ಶೇ. 90 ರಿಯಾಯಿತಿ ದರದಲ್ಲಿ ಸಿಗಲಿದ್ದು, ರೈತರು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದೆಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಲ್ಲಿ ಹೆಚ್ಚಾಗಿ ರೈತರು ಎಂ.ಆರ್. ತಳಿಯ ವಿವಿಧ ತಳಿ ಬಿತ್ತನೆ ಮಾಡುತ್ತಾರೆ. ಪ್ರತಿ ವರ್ಷ ಕೃಷಿ ಇಲಾಖೆ ಒಂದೊಂದು ತಳಿ ಮಾತ್ರ ಶೇಖರಣೆ ಮಾಡಿ ನೀಡುತ್ತಿತ್ತು. ಆದರೆ, ಈ ಬಾರಿ ರೈತರ ಬೇಡಿಕೆ ಇರುವ ತಳಿಗಳ ದಾಸ್ತಾನು ಮಾಡಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಸರ್ಕಾರ ರಿಯಾಯಿರಿ ದರದಲ್ಲಿ ಬಿತ್ತನೆ ಬೀಜ ಕೊಡುವ ಬದಲು ಉಚಿತವಾಗಿ ಬಿತ್ತನೆ ಬೀಜ ವಿತರಿಸಿದರೆ ರೈತರಿಗೆ ಅನುಕೂಲವಾಗಲಿದೆ.ನಂದೀಶ್‌ಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ, ಅವ್ವೇರಹಳ್ಳಿರೈತರಿಗೆ ಬೇಕಾದ ರಾಗಿ, ಹಲಸಂದೆ, ತೊಗರಿ ಬಿತ್ತನೆ ಬೀಜ, ಗೊಬ್ಬರ, ಔಷಧ ಸಾಕಷ್ಟು ಪ್ರಮಾಣದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇಖರಿಸಲಾಗಿದೆ. ಸರ್ಕಾರದ ರಿಯಾಯಿತಿ ದರದಲ್ಲಿ ದೃಢೀಕೃತ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ರೈತರು ಸರ್ಕಾರದ ಸದುಪಯೋಗ ಪಡೆದುಕೊಳ್ಳಬೇಕು. ಎಚ್.ಆರ್. ಪ್ರಮೋದ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ