ಶುರುವಾಗದ ಕೃಷಿ ಚಟುವಟಿಕೆ

agriculture
ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
Published on

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಜೂನ್ ಅರ್ಧ ತಿಂಗಳು ಪೂರೈಸಿದೆ. ಭತ್ತದ ಕೃಷಿ ಚಟುವಟಿಕೆ ಎಲ್ಲಿಯೂ ಕಾಣುತ್ತಿಲ್ಲ. ಗದ್ದೆಗಳಲ್ಲಿ ನೀರು ನಿಂತಿಲ್ಲ. ಮ್ಯಾಟ್ ಮೇಲೆ ಮಾಡಿದ ಬೀಜ ಬಿತ್ತನೆ ಚಿಪ್ಪೊಡೆದು ಮೇಲಕ್ಕೆ ಬರುತ್ತಿಲ್ಲ. ಒಟ್ಟಾರೆ ಕರಾವಳಿ ಭಾಗದಲ್ಲಿ ಭತ್ತ ಕೃಷಿಯ ಓಬ್ಯಾಲೆ ಸ್ವರ ಮಾರ್ದನಿಸದೆ ಭತ್ತ ಕೃಷಿ ಹಿನ್ನಡೆ ಕಾಣುತ್ತಿದೆ.

ಮುಂಗಾರು ಮಾರುತ ಈಗಾಗಲೇ ಘಟ್ಟ ದಾಟಿ ಸಾಗಬೇಕಿದ್ದರೂ ಘಟ್ಟದ ಬುಡಕ್ಕೂ ಬಾರದಿರುವುದು ಕೃಷಿಗೆ ಮಾರಕ ಎಂದು ಹಿರಿಯ ಕೃಷಿಕರು ಹೇಳುತ್ತಿದ್ದಾರೆ. ಮುಂಗಾರು ಜೂನ್ ಮೂರು ವಾರದ ನಂತರವೂ ಸುರಿದ ಉದಾಹರಣೆ ಇದೆ. ಆದರೂ ಈ ಬಾರಿ ಜಿಲ್ಲೆಯಲ್ಲಿ ಭತ್ತದ ಉತ್ಪಾದನೆ ಕುಂಠಿತವಾದರೂ ಅಚ್ಚರಿಯಲ್ಲ. ಕಳೆದ ಎರಡು-ಮೂರು ವರ್ಷದಿಂದ ಸಹಜ ಮಳೆ ಕಡಿಮೆಯಾಗಿ ಚಂಡಮಾರುತ ಆಶ್ರಿತ ಮಳೆ ಆಗುತ್ತಿದ್ದು, ಚಂಡಮಾರುತ ಮಳೆ ಭೂಮಿಯನ್ನು ಒದ್ದೆ ಮಾಡುತ್ತದೆಯೇ ಹೊರತು ತಂಪು ಹುಟ್ಟಿಸೋದಿಲ್ಲ. ನದಿಗಳು ಒಣಗಿ ಹೋಗಿರುವುದಕ್ಕೆ ಇದೇ ಕಾರಣ ಎನ್ನುವ ಅಭಿಪ್ರಾಯವನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಶೇ.50ರಷ್ಟು ಕಡಿಮೆ ಆಗಿದ್ದು, ಶಾಸ್ತ್ರಕ್ಕೆ ಎನ್ನುವಂತೆ ಒಂದೆರಡು ಮಳೆ ಅರ್ಧ ಗಂಟೆಗೊಮ್ಮೆ ನಿಮಿಷಗಳ ಲೆಕ್ಕದಲ್ಲಿ ಬಂದು ಹೋಗಿದ್ದು ಬಿಟ್ಟರೆ ಭೂಮಿಯನ್ನು ಇದುವರೆಗೆ ನೆನೆಸಿಲ್ಲ. ಜೂನ್ ಅರ್ಧ ತಿಂಗಳು ಮಳೆಗಾಲದ ಸೀಜನ್ ಕಳೆದಿದ್ದರೂ ಇನ್ನೂ ನದಿಗಳು ನೀರು ಕಂಡಿಲ್ಲ. ಹವಾಮಾನ ಇಲಾಖೆ ಆಶಯದಂತೆ ಜೂ.22ರ ನಂತರ ಮಳೆ ಬರಲಿ ಎಂದು ಕಾಯುವುದನ್ನು ಬಿಟ್ಟರೆ ಮತ್ತೇನು ಮಾಡುವುದಕ್ಕೂ ಆಗೋದಿಲ್ಲ. ಕುಡಿಯುವುದಕ್ಕೆ ನೀರು ತತ್ವಾರ ಆಗಿರುವಾಗ ನೀರು ಹಾಯಿಸಿ ಬೀಜ ಹಾಕುವುದಕ್ಕೂ ಆಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಭತ್ತದ ಕೃಷಿ ಗುರಿ

ಉಡುಪಿ ಜಿಲ್ಲೆಯಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಉತ್ಪಾದನೆ ಗುರಿ ಇದ್ದು, ಕಳೆದ ಬಾರಿ ಕೂಡ ಇಷ್ಟೇ ಇತ್ತು. ಉಡುಪಿ 17,650, ಕುಂದಾಪುರ 13,250, ಕಾರ್ಕಳ 7,100 ಹೆಕ್ಟೇರ್ ಭತ್ತ ಕೃಷಿ ಗುರಿ ಹೊಂದಿದ್ದು, ಎಂ-4 ಹೆಚ್ಚು ವಿತರಣೆಯಾದ ಭತ್ತದ ಬೀಜ. ಜಿಲ್ಲೆಯಲ್ಲಿ 2,500 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 1,914 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. 1,085 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ಕೋಟ, ಬ್ರಹ್ಮಾವರ, ಉಡುಪಿ, ಕುಂದಾಪುರ, ಬೈಂದೂರು, ವಂಡ್ಸೆ ರೈತ ಸೇವಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯವಿದೆ. ಕೆ.ಜಿ.ಗೆ 45.75 ರೂ. ನಿಗದಿಪಡಿಸಲಾಗಿದೆ. ಸಾಮಾನ್ಯ 8 ರೂ. ಹಾಗೂ ಎಸ್‌ಸಿ-ಎಸ್ಟಿಗೆ 12 ರೂ. ಸಬ್ಸಿಡಿ ಇದೆ. ಹಸುರೆಲೆ ಗೊಬ್ಬರ, ಡಿಎಪಿ, ಎಂಒಪಿ, ಎನ್‌ಪಿಕೆ ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿ 1,380 ಟನ್ ವಿವಿಧ ರಸಗೊಬ್ಬರ ಇಲಾಖೆ ಬಳಿ ಸ್ಟಾಕ್ ಇದೆ. ಜ್ಯೋತಿ, ಜಯ ತಳಿ ಬೀಜಗಳು ಲಭ್ಯ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿಗೆ ಮಳೆಯ ಕೊರತೆಯೇ ದೊಡ್ಡ ಹಿನ್ನಡೆ. ನಮ್ಮಲ್ಲಿ ಬಿತ್ತನಬೀಜ, ಗೊಬ್ಬರ ಸಾಕಷ್ಟು ದಾಸ್ತಾನು ಇದ್ದು, ಜ್ಯೋತಿ ಹಾಗೂ ಇನ್ನಿತರ ಬೀಜಗಳು ಲಭ್ಯವಿವೆ. ಕಳೆದ ಸಾಲಿನಲ್ಲಿ ಇಷ್ಟೊತ್ತಿಗೆ ಬೀಜ ದಾಸ್ತಾನು ಮಗಿದು ಹೋಗಿರುತ್ತಿದ್ದು, ಈ ಬಾರಿ ಮಳೆ ನೋಡಿ ಬೀಜ ವಿಕ್ರಯಿಸುತ್ತಿದ್ದಾರೆ. ಕುಂದಾಪುರದಲ್ಲಿ ಒಟ್ಟು 13,250 ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕೃಷಿ ಗುರಿ ಇದೆ. ಮುಂಗಾರು ಹಾಗೂ ಹವಾಮಾನ ವೈಪರೀತ್ಯ ಕೃಷಿಗೆ ಹಿನ್ನಡೆ ಮಾಡುತ್ತಿದ್ದು, ರೈತರು ಬಾವಿ ಅಥವಾ ಹೊಳೆ ಕೆರೆಗಳ ನೀರು ಬಳಸಿಕೊಂಡು ಮ್ಯಾಟ್ ಬೀಜ ಬಿತ್ತನೆ ಮಾಡುಕೊಳ್ಳುವುದಕ್ಕೂ ನೀರಿಲ್ಲದೆ ಹೆಚ್ಚಿನ ರೈತರು ಮಳೆ ಬಂದು ಗದ್ದೆಯಲ್ಲಿ ನೀರಾದ ನಂತರ ಬೀಜ ಬಿತ್ತಿ ಸಸಿ ಮಾಡಿಕೊಂಡು ಕೃಷಿ ಮಾಡಬೇಕಾದ ಸ್ಥಿತಿ ಇದೆ.-ರೂಪಾ ಮಾಡ, ಸಹಾಯಕ ಕೃಷಿ ಅಧಿಕಾರಿ, ಕೃಷಿ ಇಲಾಖೆ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net