

ಚಿಂತಾಮಣಿ: ದೇಶದ ಬೆನ್ನೆಲುಬಾಗಿರುವ ಅನ್ನದಾತರನ್ನು ಗುರುತಿಸಲು ಪ್ರತಿವರ್ಷ ಡಿ.23ರಂದು ರಾಷ್ಟ್ರೀಕ ಕೃಷಿಕರ ದಿನ ಆಚರಿಸಲಾಗುತ್ತದೆ. ಅದೇರೀತಿ ಬ್ಯಾಂಕ್
ವತಿಯಿಂದ ರೈತರಿಗೆ ಗೌರವ ಸಲ್ಲಿಸಲು ಸಂತೋಷವಾಗುತ್ತದೆ ಎಂದು ಎಸ್‌ಬಿಐ ಹಿರಿಯ ಅಧಿಕಾರಿ ಪ್ರಸನ್ನ ನಾಗೇಂದ್ರ ಹೇಳಿದರು.
ತಾಲೂಕಿನ ಆನೂರಿನಲ್ಲಿ ಬ್ಯಾಂಕ್ ವತಿಯಿಂದ ಗುರುವಾರ ಆಯೋಜಿಸಿದ್ದ ಕಿಸಾನ್ ಗೋಷ್ಠಿ - ಸಂಧ್ಯಾ ಶಿಬಿರದಲ್ಲಿ ರೈತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿಯೊಬ್ಬ ರೈತನ ಬ್ಯಾಂಕ್ ಆಗಿರುವುದರಿಂದ ರೈತರೊಂದಿಗೆ ಈ ದಿನವನ್ನು ಹಂಚಿಕೊಳ್ಳಲು ಹೆಮ್ಮೆಯಾಗಿದೆ. ಅನ್ನದಾತರು ತಮ್ಮ ಶ್ರಮದಿಂದ ಕೇವಲ ಅನ್ನ ನೀಡುವುದಲ್ಲದೇ, ಬಟ್ಟೆಯಿಂದ ಹಿಡಿದು ಔಷಧಗಳವರೆಗೆ ವಿವಿಧ ವ್ಯವಹಾರಗಳಿಗೆ, ಉದ್ಯಮಗಳಿಗೆ ಬೆಂಬಲ ನೀಡಿದ್ದಾರೆ. ಅವರ ಕೊಡುಗೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನೆಲದ ಆಚೆಗೂ ಕೃಷಿಯ ಮಹತ್ವ ವಿಸ್ತರಿಸಿದೆ. ಕೃಷಿ ನಮ್ಮ ರಾಷ್ಟ್ರೀಯ ಹೆಗ್ಗುರುತು ಮತ್ತು ಆರ್ಥಿಕ ಸಮೃದ್ಧಿಯ ಸೂಚಕ ಎಂದು ತಿಳಿಸಿದರು.
ವ್ಯವಸ್ಥಾಪಕ ಲಕ್ಷ್ಮೀಗಣೇಶ್ ಮಾತನಾಡಿ, ಕೃಷಿ ಮೂಲಸೌಕರ್ಯ ನಿಧಿ, ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣೆ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಉದ್ಯಮ ಸಾಲ, ಕಿಸಾನ್ ಸಮೃದ್ಧಿ ಋಣ್ ಯೋಜನೆಗಳ ಬಗ್ಗೆ ರೈತರಿಗೆ ಸವಿವರವಾಗಿ ತಿಳಿಸಿದರು.
ಸನ್ಮಾನ-ಬಹುಮಾನ: ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ತೋರಿದ ಪ್ರಗತಿಪರ ರೈತರಿಗೆ, ಉತ್ಸಾಹಿ ರೈತರಿಗೆ ಎಸ್‌ಬಿಐ ವತಿಯಿಂದ ಸನ್ಮಾನಿಸಲಾಯಿತು. ಆನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.
ಶಾಖಾ ವ್ಯವಸ್ಥಾಪಕ ಸಾಯಿ ವಿಕ್ರಮ್, ಮುಖಂಡ ಆನೂರು ಸುಬ್ಬಣ್ಣ, ರೈತಸಂಘದ ಅಧ್ಯಕ್ಷ ರವಣಾರೆಡ್ಡಿ, ಪ್ರಗತಿಪರ ರೈತ ವೀರಪ್ಪರೆಡ್ಡಿ, ಬ್ಯಾಂಕಿನ ಅಧಿಕಾರಿ ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಜಿಡಿಪಿಗೆ ಶೇ.18 ಕೊಡುಗೆ
ರೈತರ ಕ್ಷೇಮ ಮತ್ತು ಸಮಗ್ರ ಕೃಷಿಕ ಸಮುದಾಯದ ಸಮೃದ್ಧಿಯ ಕಡೆಗೆ ಭಾರತ ಸರ್ಕಾರ ಬಾಧ್ಯತೆ ತೋರಿದೆ. ಕೃಷಿ ವಲಯವು 140 ಕೋಟಿ ಭಾರತೀಯರಿಗೆ ಆಹಾರ ಸುರಕ್ಷತೆಯನ್ನು ಒದಗಿಸಿದೆ ಮತ್ತು ದೇಶದ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡುತ್ತದೆ ಎಂಬ ಸಂಗತಿಯಿಂದ ಭಾರತದ ಆರ್ಥಿಕತೆಯಲ್ಲಿ ರೈತರ ಪಾತ್ರವನ್ನು ಎಷ್ಟಿದೆ ಎನ್ನುವುದನ್ನು ಪ್ರತಿಪಾದಿಸಬಹುದು. ಕರೊನಾ ಸಂದರ್ಭದಲ್ಲಿ ಕೂಡ ಬೆಳವಣಿಗೆ ತೋರಿದ ಏಕೈಕ ವಲಯ ಎಂದರೆ ಕೃಷಿ. ನಮ್ಮ ಅರ್ಥ ವ್ಯವಸ್ಥೆಯಲ್ಲಿ ಎಲ್ಲವನ್ನೂ ಚಿಲ್ಲರೆ ವ್ಯಾಪಾರದಲ್ಲಿ ಖರೀದಿಸಿ, ಮತ್ತೆಲ್ಲವನ್ನೂ ಸಗಟು ವ್ಯಾಪಾರದಲ್ಲಿ ಮಾರಾಟ ಮಾಡಿ, ಎರಡೂ ಕಡೆ ರವಾನೆ ಶುಲ್ಕ ಪಾವತಿಸುವ ಏಕೈಕ ವ್ಯಕ್ತಿ ರೈತ ಮಾತ್ರ ವ್ಯವಸ್ಥಾಪಕ ಲಕ್ಷ್ಮೀಗಣೇಶ್ ತಿಳಿಸಿದರು.