

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ. ಅಂತೆಯೇ ಕುಲುಮೆಯ ಕಸುಬುದಾರರ ಬದುಕು ಕಮರಿಹೋಗತೊಡಗಿದೆ.
ಇದರ ನಡುವೆಯೂ ಕುಲ ಕಸುಬುಗಳನ್ನು ಬದುಕಿನ ಪೂರ್ಣ ಪ್ರಮಾಣದ ಉದ್ಯಮವನ್ನಾಗಿಸಿಕೊಂಡು, ಸಹಸ್ರಾರು ಮೈಲಿ ದೂರದಿಂದ ಈ ಭಾಗದ ಊರುಗಳಿಗೆ ಬಂದು ಬದುಕು ಕಟ್ಟಿಕೊಳ್ಳುವ ಜತೆಗೆ ಕೃಷಿಗಳಿಗೆ ಅಗತ್ಯ ಇರುವ ಸಲಕರಣೆಯನ್ನು ರೈತರ ಮನೆ ಬಾಗಿಲಲ್ಲೇ ತಯಾರಿಸಿಕೊಡುತ್ತಿರುವ ಮಹಾರಾಷ್ಟ್ರದಿಂದ ವಲಸೆ ಬಂದ ಕುಟುಂಬಗಳು ಗಮನ ಸೆಳೆಯುತ್ತಿವೆ.
ಜಿಲ್ಲೆಯಲ್ಲಿ ರಾಗಿ ಕಟಾವು ಪ್ರಾರಂಭವಾಗಿರುವ ಬೆನ್ನಲ್ಲೇ ಕಟಾವಿಗೆ ಪೂರಕವಾಗಿರುವ ಕುಡುಗೋಲು, ಕೃಷಿ ಸಲಕರಣೆ ತಯಾರಿಸುವ ವಲಸೆ ಕುಟುಂಬಗಳು ಗ್ರಾಮಗಳಲ್ಲಿ ಬೀಡುಬಿಟ್ಟು, ಉಪಕರಣ ತಯಾರಿಕೆಯಲ್ಲಿ ನಿರತವಾಗಿವೆ.
ಕೃಷಿ ಪ್ರಾರಂಭಕ್ಕೆ ಮಳೆ ಹೇಗೆ ಅಗತ್ಯವೋ ಹಾಗೆಯೇ ಕೃಷಿ ಸಲಕರಣೆಗಳು ಅತ್ಯವಶ್ಯ. ಭೂಮಿ ಹದಗೊಳಿಸುವುದರಿಂದ ಹಿಡಿದು ಫಸಲು ಕಟಾವು ಮಾಡಿ ಮನೆಗೆ ಧಾನ್ಯ ತರುವ ತನಕ ಸಲಕರಣೆಗಳಿಲ್ಲದೆ ಯಾವ ಕೆಲಸವು ಸಾಗದು.
ಪ್ರಸ್ತುತ ಜಿಲ್ಲೆಯಲ್ಲಿ ರಾಗಿ ಕಟಾವು ಪ್ರಾರಂಭವಾಗಿರುವ ಕಾರಣ ಕಟಾವಿಗೆ ಕುಡುಗೋಲಿಗೆ ಬೇಡಿಕೆ ಇದೆ. ಇಂತಹ ಬೇಡಿಕೆ ಮನಗಂಡ ಕುಟುಂಬಗಳು ಮಹಾರಾಷ್ಟ್ರದಿಂದ ವಲಸೆ ಬಂದಿದ್ದು, ಗ್ರಾಮದ ರಸ್ತೆ ಬದಿಗಳಲ್ಲಿ ಕುಲುಮೆ ಹಾಕಿ ಕೃಷಿ ಸಲಕರಣೆ ತಯಾರಿಸುವ ಕಾಯಕದಲ್ಲಿ ನಿರತವಾಗಿವೆ.
ರೈತರು ಕೊಯ್ಲಿಗೆ ಬೇಕಾದ ರೀತಿಯಲ್ಲಿ ಕುಡುಗೋಲನ್ನು ತಯಾರು ಮಾಡಿಸಿಕೊಂಡು ಮನೆ ಬಾಗಿಲಿನಲ್ಲೇ ಕೃಷಿ ಸಲಕರಣೆ ಕೊಳ್ಳುತ್ತಿದ್ದಾರೆ. ಕೃಷಿ ಕಾರ್ಯದಲ್ಲಿ ಕುಡುಗೋಲು ಜತೆಗೆ ನೇಗಿಲು, ಸನಿಕೆ, ಹಾರೆ, ಪಿಕಾಸಿ, ಮಚ್ಚು, ಬೇಲಿ ಸವರುವ ಕುಡುಗೋಲು, ಕಳೆ ತೆಗೆಯುವ ಚಿಕ್ಕ ಕುಡುಗೋಲು, ಮಚ್ಚು, ತೆಂಗಿನಕಾಯಿ ಸುಲಿಯುವ ದೊಡ್ಡ ಕುಡುಗೋಲು ಮುಂತಾದ ಸಲಕರಣೆಗಳನ್ನು ತಯಾರಿಸಲಾಗುತ್ತಿದೆ.
ಪೂರ್ವಜರ ಕಾಲದಿಂದಲೂ ಕೈ ಕುಸುರಿಯಲ್ಲಿ ಸಿದ್ಧಗೊಂಡ ಆಯುಧಗಳನ್ನು ಕೃಷಿ ಕಾರ್ಯದಲ್ಲಿ ಉಪಯೋಗಿಸಲಾಗುತ್ತಿದೆ. ಆಧುನಿಕ ಯಂತ್ರಗಳು ವಿವಿಧ ರೀತಿಯಲ್ಲಿ ಬಂದರೂ, ಅವುಗಳ ಬಳಕೆ ನಿಂತಿಲ್ಲ. ಇಂತಹ ಆಯುಧಗಳ ತಯಾರಿಕೆ ಸ್ಥಳಿಯ ಗ್ರಾಮ ಮಟ್ಟದಲ್ಲೇ ದಶಕದ ಹಿಂದೆ ಕುಲುಮೆ ಕೆಲಸ ಮಾಡುತ್ತಿದ್ದರು. ಆಧುನಿಕತೆಯ ಭರಾಟೆಯಲ್ಲಿ ಸಲಕರಣೆಗಳ ಬೇಡಿಕೆ ಕುಗ್ಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಲುಮೆ ಕೆಲಸಗಾರರು ವೃತ್ತಿಯನ್ನು ಬಿಟ್ಟು ಹೆಚ್ಚು ಆದಾಯ ಬರುವ ಕೆಲಸದತ್ತ ವಾಲಿದ್ದರಿಂದ ರೈತರು ನಗರ ಪ್ರದೇಶದ ಮಾರುಕಟ್ಟೆ ಮೊರೆಹೊಗುವಂತಾಗಿದೆ. ಸದ್ಯ ವಲಸೆ ಕುಟುಂಬಗಳು ಗ್ರಾಮ ಗ್ರಾಮದಲ್ಲಿ ಒಂದೆರಡು ದಿನಗಳ ಮಟ್ಟಿಗೆ ಟೆಂಟ್ ಹಾಕಿ, ಅಲ್ಲಿಯೇ ಸಲಕರಣೆ ತಯಾರಿಸಿ ಕೊಡುತ್ತಿದ್ದಾರೆ. ಕೂಟಗಲ್, ಬನ್ನಿಕುಪ್ಪೆ, ಕೈಲಾಂಚ, ದೊಡ್ಡಗಂಗವಾಡಿ, ಲ್ಮಪುರ, ಸುಗ್ಗನಹಳ್ಳಿ, ಲಕ್ಕೋಜನಹಳ್ಳಿ, ಕವಣಾಪುರ ಮುಂತಾದ ಗ್ರಾಮಗಳಲ್ಲಿ ಕುಲುಮೆದಾರರು ಬೀಡು ಬಿಟ್ಟಿದ್ದಾರೆ.
ನಮ್ಮ ಕುಟುಂಬಕ್ಕೆ ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇದನ್ನೇ ನಂಬಿ ಜೀವನ ನಡೆಸಬೇಕು. ಅಲ್ಲದೆ, ಅತೀ ಹೆಚ್ಚಿನ ಕುಟುಂಬಗಳು ಇದೇ ಕೆಲಸ ಮಾಡುವುದರಿಂದ ನಮ್ಮಲ್ಲಿ ಪೈಪೋಟಿ ಹೆಚ್ಚು. ಸ್ಥಳಿಯವಾಗಿ ನಾವು ತಯಾರಿಸುವ ವಸ್ತುಗಳಿಗೆ ಬೇಡಿಕೆ ಇಲ್ಲ, ಹೋಳಿ ಹಬ್ಬದ ಸಮಯದಲ್ಲಿ ಒಂದೆರಡು ತಿಂಗಳು ಮಾತ್ರ ಊರಿನಲ್ಲಿ ಇರುತ್ತದೆ ಎನ್ನುತ್ತಾರೆ ಕುಲುಮೆ ಕೆಲಸಗಾರ ವಾಮನ್ ಪವಾರ್.
ಜೀವನ ನಿರ್ವಹಣೆ ಕಷ್ಟವಾಗಿರುವ ಕಾರಣ 10 ತಿಂಗಳು ಕರ್ನಾಟಕದ ವಿವಿಧ ಭಾಗಗಳಿಗೆ ಸುತುತ್ತ ಆಯಾ ಪ್ರದೇಶಕ್ಕೆ ಹೊಂದುವ ಕೃಷಿ ಸಲಕರಣೆ ಮಾಡಿಕೊಟ್ಟು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುತ್ತಿದ್ದೇವೆ. ನಾನು, ನನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಓಡಾಟಕ್ಕೆ ಟೆಂಪೋ ಇದೆ. ಕಂತಿನಲ್ಲಿ ವಾಹನ ಖರೀದಿಸಿದ್ದೇವೆ. ಪ್ರತಿ ತಿಂಗಳು 15 ಸಾವಿರ ರೂ. ಕಂತು ಕಟ್ಟಬೇಕು. ಬಂದ ಹಣದಲ್ಲಿ ವಾಹನದ ಕಂತು, ದಿನನಿತ್ಯದ ಜೀವನ ನಡೆಸಬೇಕು ಎಂದು ವಾಮನ್ ಪವಾರ್ ತಿಳಿಸಿದರು.
ಕುಟುಂಬ ಸಮೇತ ದುಡಿಮೆಗಾಗಿ ಊರೂರು ಸುತ್ತುತ್ತಿರುವ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತವಾಗಿದ್ದಾರೆ. ಶಾಲೆಗೆ ಕಳುಹಿಸುತ್ತಿಲ್ಲವೇ ಎಂದು ಕೇಳಿದರೆ ಹೋಗುತ್ತಾರೆ ಎಂಬ ಉತ್ತರ ಸಿಗುತ್ತದೆ. ಆದರೆ, ಅವರು ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ ನಡೆಸಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಮಾತ್ರ ನೋವಿನ ಸಂಗತಿ.
ವರ್ಷದ ಹತ್ತು ತಿಂಗಳು ಹೊರಗೆ ಬಂದು ಈ ರೀತಿ ಊರೂರಿನಲ್ಲಿ ಟೆಂಟ್ಹಾಕಿ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬ ಜೀವನ ನಿರ್ವಹಣೆ ಮಾಡುತ್ತೇವೆ. ನಮ್ಮ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಮೊದಲೇ ಇಲ್ಲ. ಹೇಗೋ ಬದುಕಿನ ಬಂಡಿ ಸಾಗಿಸಬೇಕಿದೆ. ಹಾಕಿದ ವಸ್ತುಗಳ ಬಂಡವಾಳ ಕೈ ಸೇರಿದರೆ ಸಾಕು ಎಂದು ಸಿಕ್ಕಷ್ಟೇ ಲಾಭಕ್ಕೆ ವಸ್ತುಗಳನ್ನು ಕೊಟ್ಟು ಬದುಕಿನ ನೊಗ ಎಳೆಯುತ್ತಿದ್ದೇವೆ. ಲಕ್ಷ್ಮಮ್ಮ ಕುಲುಮೆ ಕೆಲಸದಲ್ಲಿ ನಿರತ ಕುಟುಂಬಸ್ಥೆಗ್ರಾಮದಲ್ಲೇ ವಲಸೆ ಬಂದಿರುವ ಕುಟುಂಬಗಳು ತಯಾರಿಸುತ್ತಿರುವ ಆಯುಧಗಳು ನಮಗೆ ಬೇಕಾದ ರೀತಿಯಲ್ಲಿ ನಮ್ಮೆದುರೆ ಉತ್ತಮ ದರ್ಜೆಯ ಕಬ್ಬಿಣ, ಅರಕದ ಉಪಕರಣದಿಂದ ಮಾಡಿಕೊಡುತ್ತಿರುವುದರಿಂದ ಅನುಕೂಲವಾಗಿದೆ. ಪೇಟೆಗೆ ಹೋಗುವುದನ್ನು ತಪ್ಪಿಸಿದ್ದಾರೆ. ಮಾರುಕಟ್ಟೆ ಬೆಲೆಗೆ ಈ ವಸ್ತುಗಳನ್ನು ಹೋಲಿಸಿದರೆ ಕಡಿಮೆ ಇದ್ದು ವಸ್ತುಗಳ ಗುಣಮಟ್ಟವೂ ಚೆನ್ನಾಗಿದೆ.ವರದರಾಜು, ರೈತ, ಬನ್ನಿಕುಪ್ಪೆ.