

ಕಡಬ: ಸವಣೂರು ಪರಿಸರದಲ್ಲಿ ಮಂಗಳವಾರ ಮುಂಜಾನೆ 5ಕ್ಕೆ ಬೀಸಿದ ಭೀಕರ ಗಾಳಿಯಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಗ್ರಾಮದ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆ ಮಡಕೆ, ಇಡ್ಯಾಡಿ ಪರಿಸರದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಆರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಪ್ರದೇಶ, ಹಲವು ಮನೆಗಳು, ಅಡಕೆ ತೋಟ, ತೆಂಗಿನ ಮರಗಳು ಹಾನಿಗೀಡಾಗಿವೆ.
ರಾಜೇಂದ್ರ ರೈ ಮುಗೇರುಗುತ್ತು ಅವರ 120ಕ್ಕೂ ಅಧಿಕ ಅಡಕೆ ಮರಗಳು, 30 ತೆಂಗು, 200 ನೇಂದ್ರ ಬಾಳೆಗಿಡಗಳು ನೆಲಕ್ಕುರುಳಿವೆ. ಗೋದಾಮಿಗೆ ಮರ ಬಿದ್ದು ಹಾನಿಯಾಗಿದೆ. ಜಿನ್ನಪ್ಪ ಗೌಡ ಅವರ 52, ದಿ.ಗೋಪಾಲಕೃಷ್ಣ ಅವರ 71, ಪುರುಷೋತ್ತಮ ಅವರ 35, ದೇವೇಂದ್ರ ಅವರ 20 ಅಡಕೆ ಮರಗಳು, ಸುಮನಾ ಮುರಳಿ ಮೋಹನ್ ಶೆಟ್ಟಿ ಅವರ 31 ಅಡಕೆ ಮರಗಳು, 8 ತೆಂಗಿನ ಮರಗಳು, ವೇದಾವತಿ ಕೆಡೆಂಜಿ ಅವರ 2 ಎಕರೆಯಲ್ಲಿದ್ದ 860, ನಾಗಪ್ಪ ಗೌಡ ಅವರ 100, ಬಾಲಕೃಷ್ಣ ನಾಯ್ಕ ಅವರ 20, ತೀರ್ಥರಾಮ ಕೆಡೆಂಜಿ ಅವರ 50ಕ್ಕೂ ಅಧಿಕ ಅಡಕೆ ಮರಗಳು ನಾಶವಾಗಿವೆ. ಕೂಜೋಡಿ ರಾಮಶರ್ಮ ಅವರ ತೋಟದ 300ಕ್ಕೂ ಅಧಿಕ ಅಡಕೆ ಮರಗಳು, 9 ತೆಂಗಿನ ಮರಗಳು, ವಾಸುದೇವ ಇಡ್ಯಾಡಿ ಅವರ 60 ಅಡಕೆ ಮರಗಳು, ಸತೀಶ್ ಶೆಟ್ಟಿ ಕಿನಾರ ಅವರ ರಬ್ಬರ್ ಮರಗಳು ನೆಲಕ್ಕುರುಳಿವೆ.
ಆರೇಲ್ತಡಿ ಕೊರಗಜ್ಜ ಕಟ್ಟೆಯ ಬಳಿಯಲ್ಲಿದ್ದ ಛಾವಣಿಯ ಶೀಟ್ಗಳು, ಅಡುಗೆ ಕೊಠಡಿ ಸಂಪೂರ್ಣ ಹಾನಿಯಾಗಿದೆ. ನಿಶಾಂತ್ ಅವರ ಮನೆಯ ಹೆಂಚು ಹಾರಿಹೋಗಿದೆ. ಕುಂಞ ಅಜಿಲ ಅವರ ಮನೆ, ಕೊಟ್ಟಿಗೆಗೆ, ಅಡಕೆ ತೋಟಕ್ಕೆ ಮರ ಬಿದ್ದು ಹಾನಿಯಾಗಿದೆ. ರಾಜೀವಿ ವಿಠಲ ಶೆಟ್ಟಿ, ವಿಠಲ ಗೌಡ, ಕುಸುಮಾವತಿ, ಚಿನ್ನಪ್ಪ ಗೌಡ, ರಾಕೇಶ್ ರೈ ಮನೆಯ ಕಟ್ಟಡಕ್ಕೆ ಹಾನಿಯಾಗಿದೆ. ಮರ ಬಿದ್ದು 25ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.