ಕೃಷಿ ವ್ಯಾಸಂಗಕ್ಕಾಗಿ ಕೃಷಿ ಕಾಲೇಜು

FotoJet
Published on

ಸಚಿವ ಚೆಲುವರಾಯಸ್ವಾಮಿ ಹೇಳಿಕೆ | ಖಾಸಗಿ ಕಾಲೇಜು ರಾಜ್ಯದಲ್ಲೇ ಪ್ರಥಮ

ಕನಕಪುರ : ಗ್ರಾಮೀಣ ಭಾಗದ ಎಲ್ಲರೂ ಕೃಷಿ ವ್ಯಾಸಂಗ ಮಾಡಲು ಅನುಕೂಲವಾಗಲೆಂಬ ಉದ್ದೇಶದಿಂದ ಕನಕಪುರಕ್ಕೆ ಕೃಷಿ ಕಾಲೇಜು ಮಂಜೂರು ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ನಗರದ ರೂರಲ್ ಎಜುಕೇಷನ್ ಸೊಸೈಟಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಕೃಷಿ ಪದವಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನಕಪುರದ ಹಿರಿಯ ಗಾಂಧಿವಾದಿ ದಿ.ಎಸ್.ಕರಿಯಪ್ಪ ಅವರ ಕನಸು ಈ ಕಾಲೇಜು ತೆರೆಯುವುದಾಗಿತ್ತು. ಕನಸನ್ನು ನನಸು ಮಾಡುವ ಉದ್ದೇಶದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್, ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಅವರು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದೇ ರೀತಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೃಷಿ ಕಾಲೇಜು ತೆರೆಯಲು ಬೇಡಿಕೆ ಇಟ್ಟಿದ್ದರು. ಇವರೆಲ್ಲರ ಆಶಯಗಳನ್ನು ಒಟ್ಟಿಗೆ ಪರಿಗಣಿಸಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಖಾಸಗಿ ಕೃಷಿ ಕಾಲೇಜು ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.

ರೂರಲ್ ಎಜುಕೇಷನ್ ಸೊಸೈಟಿ ಹಾಗೂ ಆದಿಚುಂಚನಗಿರಿ ಮಠವು ಸಮಾಜದಲ್ಲಿ ತೋರಿರುವ ಸಾಕ್ಷರತಾ ಆಂದೋಲನದ ಹಿನ್ನೆಲೆಯಲ್ಲಿ ಸರ್ಕಾರ ಈ ಕೊಡುಗೆ ನೀಡಿದೆ ಎಂದರು.

ಸ್ವಾತಂತ್ರ್ಯಾ ನಂತರ ಖಾಸಗಿ ಕಾಲೇಜು ಪ್ರಾರಂಭವಾಗಿರುವುದರಿಂದ ಕೃಷಿ ಪದವಿ ಪಡೆದು ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಎದುರಾಗಬಹುದಾದ ಆಹಾರ ಕೊರತೆ ನೀಗಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ತುಂಬುವ ಕೆಲಸ ಆಗಬೇಕು. ಕೃಷಿಯನ್ನೇ ನಂಬಿರುವ ನಮ್ಮ ರೈತರು ಆಧುನಿಕ ಪದ್ಧತಿ ಅಳವಡಿಸಿಕೊಂಡು ಮುಂದುವರಿದರೆ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಆರ್.ಇ.ಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಶಾಸಕರಾದ ಇಕ್ಬಾಲ್ ಹುಸೇನ್, ಎಸ್.ರವಿ, ಭವಾನಿ ಟ್ರಸ್ಟ್ ಲಕ್ಷ್ಮಣ್, ವಿ.ವಿ. ಉಪಕುಲಪತಿ ಡಾ.ಸುರೇಶ್, ಕೃಷಿ ಕಾಲೇಜು ಪ್ರಾಂಶುಪಾಲ ಟಿ.ಕೆ.ಸಿದ್ದರಾಮೇಗೌಡ, ಆಡಳಿತ ಅಧಿಕಾರಿ ಪುಟ್ಟರಾಜು ಸೇರಿ ಇತರರು ಇದ್ದರು.

ಶಿವಕುಮಾರ್ ಬಂಡೆಯಲ್ಲ ಬೆಣ್ಣೆ

ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಜನರು ವ್ಯತಿರಿಕ್ತ ಸ್ವಭಾವ ಹೇಳುತ್ತಾರೆ. ಆದರೆ, ಹತ್ತಿರದಿಂದ ನೋಡಿದಾಗ ಇವರಷ್ಟು ಮೃದು ಸ್ವಭಾವದ ವ್ಯಕ್ತಿ ಇಲ್ಲ ಎನ್ನುವುದು ತಿಳಿಯಲಿದೆ. ಎಲ್ಲರೂ ಇವರನ್ನು ಬಂಡೆ ಬಂಡೆ ಎಂದು ಸಂಬೋಧಿಸುತ್ತಾರೆ. ಆದರೆ, ಇವರು ಬಂಡೆಯಲ್ಲ, ಬೆಣ್ಣೆಯಂತಹ ಮೃದು ಸ್ವಭಾವದ ವ್ಯಕ್ತಿ ಎಂಬುದನ್ನು ನಾವು ಕಂಡಿದ್ದೇವೆ. ಅವರ ಶ್ರಮ ಅರಿತು ಜಿಲ್ಲೆಯ ಜನತೆ ತಾಲೂಕಿನ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ಕೈ ಗೆಲ್ಲಿಸಿ ಅವರಿಗೆ ಶಕ್ತಿ ನೀಡಿರುವುದು ಮಾದರಿ ಎಂದು ಚಲುವರಾಯಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net