ಮಾಗಡಿಯಲ್ಲಿ ಕೃಷಿ ಚಟುವಟಿಕೆ ಚುರುಕು

Preparation of loads for agricultural activities
Published on

* ಮಾಗಡಿ ತಾಲೂಕಿನಲ್ಲಿ 28.885 ಹೆಕ್ಟರ್‌ನಲ್ಲಿ ರಾಗಿ ಬೆಳೆಯುವ ಗುರಿ

* ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಬಿತ್ತನ ಬೀಜ ವಿತರಣೆ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿವೆ. ರೈತರು ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಜೂನ್ ಅಂತ್ಯದಲ್ಲಿ ರಾಗಿ ಬಿತ್ತನೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

ಕಳೆದ ವರ್ಷ ಸುಡುಬಿಸಿಲಿನ ಬೇಗೆ ಹಾಗೂ ದ್ವಿದಳ ಧಾನ್ಯಗಳ ಬೆಳೆಯುವ ಪ್ರಮಾಣ ಕಡಿಮೆಯಾದ ಕಾರಣ ರಾಸುಗಳಿಗೆ ಮೇವಿನ ಕೊರತೆ ಎದುರಾಗಿತ್ತು. ಹಾಗಾಗಿ ಈ ಬಾರಿ ರಾಗಿ ಬೆಳೆಗೆ ಹೆಚ್ಚು ಮಹತ್ವ ನೀಡುತ್ತಿರುವುದು ಕಂಡುಬಂದಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಬೇಡಿಕೆಗೆ ಅನುಗುಣವಾಗಿ ತೊಗರಿ, ಅಲಸಂದೆ, ಎಂ.ಆರ್ ರಾಗಿ-1, ಎಂ.ಅರ್ -2, ಎಂ.ಆರ್ -9 ರಾಗಿ ತಳಿಗಳ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ.

ಪ್ರಸ್ತುತ ಮುಂಗಾರು ಕ್ಷಿಣಿಸಿಗೊಂಡ ಕಾರಣ ರೈತರು ತೊಗರಿ ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಅಲಸಂದೆ ಬಿತ್ತನೆಗೆ ಬೀಜ ಖರೀದಿ ಮಾಡುತ್ತಿದ್ದಾರೆ. ಎಲ್ಲ ಹೋಬಳಿ ರೈತ ಸಂಪರ್ಕ ಕೇಂದ್ರಗಳ ಮೂಲಕವು ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 28.885 ಹೆಕ್ಟರ್‌ನಲ್ಲಿ ರಾಗಿ ಬಿತ್ತನೆ ಗುರಿಯಿದೆ. ಕಸಬಾ, ಮಾಡಬಾಳ್, ಕುದೂರು, ತಿಪ್ಪಸಂದ್ರ ಸೋಲೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಭೂ ದಾಖಲೆ ನೀಡಿ ಬಿತ್ತನೆ ಬೀಜ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಂ.ಆರ್-1 ಹಾಗೂ ಇತರ ಮಾದರಿಯ ರಾಗಿ ಬಿತ್ತನೆ ಬೀಜವೂ ದೊರಕಲಿದ್ದು, ತಲಾ 5 ಕೆಜಿ ಬ್ಯಾಗ್‌ಗಳ ಮೂಲಕ ಪೂರೈಕೆ ಮಾಡಿದ್ದು, ರೈತರಿಗೆ ಸಹಾಯಧನದಲ್ಲಿ ವಿತರಣೆ ಮಾಡಲಾಗುವುದು. ಅಂತೆಯೇ, ಶೇ. 50ರ ರಿಯಾಯಿತಿ ದರದಲ್ಲಿ ನೇಗಿಲು ಹಾಗೂ ಇತರ ಕೃಷಿ ಚಟುವಟಿಕೆಗೆ ಪೂರಕವಾದ ಯಂತ್ರೋಪಕರಣ ನೀಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ವಿಜಯ ಶವಣೂರು ತಿಳಿಸಿದ್ದಾರೆ.

ಕೃಷಿ ಅಭಿಯಾನ

ಸದ್ಯದಲ್ಲಿಯೇ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕುದೂರು ಹೋಬಳಿಯಿಂದ ಅಭಿಯಾನ ಆರಂಭಿಸಲಾಗುವುದು. ಎಲ್ಲ್ಲ ಹೋಬಳಿ ಕೇಂದ್ರದಲ್ಲೂ ಅಭಿಯಾನ ಹಮ್ಮಿಕೊಳ್ಳುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳ ಸಮಗ್ರ ಮಾಹಿತಿ ಹಾಗೂ ಕೀಟ ನಾಶಕ ಔಷಧ, ಕಳೆ ತೆಗೆಯುವುದು, ಯಂತ್ರೋಪಕರಣಗಳ ಪ್ರದರ್ಶನ, ರೈತರ ಸಂವಾದ ಕಾರ್ಯಕ್ರಮ ಸೇರಿ ಕೃಷಿಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಅಗತ್ಯ ತರಬೇತಿ ನೀಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಸಾಕಷ್ಟು ಅನುದಾನವಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸವಲತ್ತು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ವಾಡಿಕೆಯಂತೆ 230 ಎಂಎಂ ಮಳೆಯಾಗಬೇಕಿತ್ತು, 268 ಎಂಎಂ ಮಳೆಯಾಗಿದೆ. ಶೇ.17 ಹೆಚ್ಚು ಮಳೆಯಾಗಿದೆ. ರಿಯಾಯಿತಿ ದರದಲ್ಲಿ ತೊಗರಿ, ಅಲಸಂಡೆ, ರಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ತೊಗರಿ, ಅಲಸಂದೆ ಬಿತ್ತನೆ ಕಾರ್ಯನಡೆಯುತ್ತಿದೆ. ವಿಜಯ ಶವಣೂರು, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net