ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು

fertilizer
Published on

* 1,744 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

* ಬಿತ್ತನೆಗೆ ರೈತರು ಸಿದ್ಧತೆ

* ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಇಲ್ಲ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜುಲೈ ಮಧ್ಯ ಭಾಗದವರೆಗೂ ಉಂಟಾದ ಮಳೆ ಕೊರತೆ ನಡುವೆ ಜಿಲ್ಲೆಯಲ್ಲಿ ಕೃಷಿಗೆ ಪೂರಕವಾದ ಮಳೆ ಆಗುತ್ತಿದ್ದು, ರೈತ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಇದರ ನಡುವೆ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆಯಾದರೂ, ಬೇಡಿಕೆ ಹೆಚ್ಚಿನ ಮಟ್ಟದಲ್ಲಿ ಇಲ್ಲದ ಕಾರಣ ಸಮಸ್ಯೆ ಉಂಟಾಗಿಲ್ಲ.

ಜಿಲ್ಲೆಯಲ್ಲಿ 81,493 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದುವರೆಗೆ 1,744 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ರಾಗಿ, `ಭತ್ತ, ಮುಸುಕಿನ ಜೋಳ, ಜೋಳ, ತೊಗರಿ, ಹುರಳಿ, ಅಲಸಂದೆ, ಅವರೆ ಸೇರಿ 15 ಬೆಳೆ ಬೆಳೆಯುತ್ತಾರೆ. ರಾಗಿಯೇ ಮುಖ್ಯ ಬೆಳೆಯಾಗಿದ್ದು, ಆಗಸ್ಟ್ ಅಂತ್ಯದವರೆಗೂ ಬಿತ್ತನೆಗೆ ಅವಕಾಶ ಇರುವ ಕಾರಣ, ಸದ್ಯಕ್ಕೆ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್, ಡಿಎಪಿ, ಎಸ್‌ಎಸ್‌ಪಿ ಹಾಗೂ ಎಂಒಪಿ ರಸಗೊಬ್ಬರ ವಿತರಿಸಲಾಗುತ್ತಿದೆ.

23,797 ಮೆಟ್ರಿಕ್ ಟನ್ ಬೇಡಿಕೆ

ಜಿಲ್ಲೆಯಲ್ಲಿ 25-26ನೇ ಸಾಲಿಗೆ 23,797 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ಆದರೆ ಈವರೆವಿಗೂ 15,169.5 ಮೆಟ್ರಿಕ್ ಟನ್ ಸರಬರಾಜು ಆಗಿದ್ದು, ಇದರಲ್ಲಿ 9,682.8 ಮೆಟ್ರಿಕ್ ಟನ್ ವಿತರಣೆ ಮಾಡಲಾಗಿದೆ. ವಿವಿಧ ದಾಸ್ತಾನು ಕೇಂದ್ರಗಳಲ್ಲಿ 5,486.67 ಮೆಟ್ರಿಕ್ ಟನ್ ರಸಗೊಬ್ಬರ ಉಳಿದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ವಿವಿಧೊದ್ದೇಶ ಸಹಕಾರ ಸಂಘ ಸೇರಿ 212 ಡೀಲರ್‌ಗಳ ಮೂಲಕ ರಸಗೊಬ್ಬರ ವಿತರಿಸಲಾಗುತ್ತಿದೆ. ಇದರಲ್ಲಿ 14 ಹೋಲ್‌ಸೇಲ್ ಡೀಲರ್‌ಗಳಿದ್ದಾರೆ. ಸದ್ಯ ಹೆಚ್ಚು ಬೇಡಿಕೆ ಇರುವ ಡಿಎಪಿ ಗೊಬ್ಬರಕ್ಕೆ ರಾಜ್ಯಮಟ್ಟದಲ್ಲೇ ಕೊರತೆ ಇದೆ. ಹಾಗಾಗಿ, ಪರ್ಯಾಯ ಗೊಬ್ಬರ ಬಳಕೆ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಬೇಡಿಕೆ ಕುಸಿತ

ಜಿಲ್ಲೆಯಲ್ಲಿ ಕೃಷಿ ಭೂಮಿಯ ವಿಸ್ತಾರವೂ ಕಡಿಮೆ ಆದಂತೆ ವರ್ಷದಿಂದ ವರ್ಷಕ್ಕೆ ರಸಗೊಬ್ಬರ ಬೇಡಿಕೆ ಕುಸಿತ ಕಾಣುತ್ತಿದೆ. ಕಳೆದ ವರ್ಷ 28,047 ಮೆಟ್ರಿಕ್ ಟನ್ ಇದ್ದ ಬೇಡಿಕೆ, ವರ್ಷ 23,797 ಮೆಟ್ರಿಕ್ ಟನ್‌ಗೆ ಕುಸಿದಿದೆ. ಒಟ್ಟಾರೆ ಬೇಡಿಕೆ 4,250 ಮೆ.ಟನ್ ಇಳಿಕೆ ಕಂಡಿದೆ. ಹಲವೆಡೆ ಈಗಷ್ಟೇ ಬಿತ್ತನೆ ಚಟುವಟಿಕೆ ಶುರುವಾಗಿರುವುದರಿಂದ ಗೊಬ್ಬರಕ್ಕಾಗಿ ರೈತರು ಮುಗಿಬೀಳುವಂತಹ ಸ್ಥಿತಿಯೂ ಜಿಲ್ಲೆಯಲ್ಲಿಲ್ಲ. ಮುಂದೆ ಬಿತ್ತನೆ ಚುರುಕುಗೊಂಡAತೆ, ಬೇಡಿಕೆಯೂ ಹೆಚ್ಚಲಿದ್ದು, ಇದನ್ನು ನಿಬಾಯಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಿದ್ದವಾಗಬೇಕಿದೆ.

ಡಿಎಪಿ ಕೊರತೆ

ಜಿಲ್ಲೆಯಲ್ಲಿ ಅತಿ ಕಡಿಮೆ ಬೇಡಿಕೆ ಇರುವ ಎಂಒಪಿ ಮತ್ತು ಎಸ್‌ಎಸ್‌ಪಿ ರಸಗೊಬ್ಬರ ಹೊರತುಪಡಿಸಿದರೆ ಯೂರಿಯಾ, ಕಾಂಪ್ಲೆಕ್ಸ್ ಹಾಗೂ ಡಿಎಪಿ ರಸಗೊಬ್ಬರಗಳ ಕೊರತೆ ಇದೆ. 260 ಮೆಟ್ರಿಕ್ ಟನ್ ಅಗತ್ಯವಿರುವ ಎಂಒಪಿ 308 ಮೆಟ್ರಿಕ್ ಟನ್ ಹಾಗೂ 116 ಮೆ.ಟನ್ ಬೇಡಿಕೆಯ ಎಸ್‌ಎಸ್‌ಪಿ ಅಗತ್ಯವಿರುವಷ್ಟು ಸರಬರಾಜಾಗಿದೆ. ಅತಿ ಹೆಚ್ಚು ಬಳಸುವ ಯೂರಿಯಾ 17,637 ಮೆ. ಟನ್ ಬೇಡಿಕೆ ಪೈಕಿ 9,988 ಮೆ.ಟನ್, ಕಾಂಪ್ಲೆಕ್ಸ್ ಬೇಡಿಕೆಯ 4,080 ಮೆ.ಟನ್ ಪೈಕಿ 4,011 ಮೆ.ಟನ್ ಹಾಗೂ ಡಿಎಪಿ ಬೇಡಿಕೆಯ 1,704 ಮೆ.ಟನ್ ಪೈಕಿ ಕೇವಲ 747 ಮೆ.ಟನ್ ಮಾತ್ರ ಪೂರೈಕೆಯಾಗಿದೆ.

ಪರ್ಯಾಯ ಬಳಕೆಗೆ ಪ್ರಚಾರ

ರೈತರು ಅತಿ ಹೆಚ್ಚು ಬೇಡಿಕೆ ಇಡುವ ಡಿಎಪಿ ಮತ್ತು ಯೂರಿಯಾಗಳ ಪೂರೈಕೆಯಲ್ಲಿ ಕೊರತೆ ಎದುರಾಗಿದೆ. ಆದರೆ ಇವುಗಳಿಗೆ ಪರ್ಯಾಯವಾಗಿ ಇತರೆ ಗೊಬ್ಬರಗಳ ಬಳಕೆಗೆ ಕೃಷಿ ಇಲಾಖೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಡಿಎಪಿಗೆ ಪರ್ಯಾಯವಾಗಿ ರಂಜಕ ಒದಗಿಸುವ 20;20;0;13 ಹಾಗೂ ಪೊಟ್ಯಾಷ್ ಒದಗಿಸುವ ಇತರ ಸಂಯುಕ್ತ ಗೊಬ್ಬರಗಳಾದ 15;15;15, 10;26;26, 12;32;16, 22;22;11, 14;35;14, 17;17;17, 14;28;14, 19;19;19, 20;10;10 ಸೇರಿ ಇತರ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ತಿಳಿ ಹೇಳಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆ ಗ್ರಾಮಮಟ್ಟದಲ್ಲಿ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸುತ್ತಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ ರಸಗೊಬ್ಬರ ಕೊರತೆ ಇಲ್ಲ. ರಾಗಿ ಬಿತ್ತನೆ ಆರಂಭಗೊAಡ ನಂತರ ಬೇಡಿಕೆ ಹೆಚ್ಚಾಗಲಿದೆ. ಕೆಲವು ಗೊಬ್ಬರಗಳ ಪೂರೈಕೆಯಲ್ಲಿ ಕೊರತೆ ಆಗಿದ್ದು, ಇದಕ್ಕೆ ಪರ್ಯಾಯವಾದ ರಸಗೊಬ್ಬರಗಳ ಬಳಕೆಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. | ಅಂಬಿಕಾ, ಜಂಟಿ ಕೃಷಿ ನಿರ್ದೇಶಕಿ, ಬೆಂಗಳೂರು ದಕ್ಷಿಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net