

ಕೈಹಿಡಿದ ಮಿಶ್ರಬೆಳೆ ಸಾವಯವ ಗೊಬ್ಬರವೇ ಜೀವಾಳ ಆರ್ಥಿಕ ಸ್ವಾವಲಂಬನೆ
ಚೇತನ್ ಚಕ್ಕೆರೆ, ಬಿಡದಿ
ದೂರದ ಬೆಂಗಳೂರಿಗೆ ಹೋಗಿ ಯಾರದ್ದೋ ಕೈ ಕೆಳಗೆ ಕೆಲಸ ಮಾಡಿ ಸಂಬಳ ಪಡೆಯುವುದಕ್ಕಿಂತ ನನಗಿರುವ ಜಮೀನಿನಲ್ಲಿ ಕೃಷಿ ಮಾಡಿ ಆದಾಯ ಕಾಣಬೇಕೆಂದು ನಿರ್ಧಾರ ಮಾಡಿದ ಯುವಕ ಇಂದು ಕೃಷಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಹೌದು, ಬಿಲ್ಲೆದೊಡ್ಡಿ ಗ್ರಾಮದ ಯುವರೈತ ಗಂಗಾಧರ್ ಅವರು ದೂರದ ಊರಿನ ಕೆಲಸ ಬಿಟ್ಟು ತನ್ನೂರಿಗೆ ಬಂದು ಜಮೀನಿನಲ್ಲಿ ವ್ಯವಸಾಯ ಮಾಡಿ ಸುಖಿ ಜೀವನ ನಡೆಸುತ್ತಿದ್ದಾರೆ. ತಮಗಿರುವ 3 ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಹಣ ನೋಡುತ್ತಿದ್ದಾರೆ.
ಒಂದರಿಂದ ಒಂದುವರೆ ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬಾಳೆಗಿಡ ನೆಟ್ಟ 9 ತಿಂಗಳಿಗೆ ಹೊಂಬಾಳೆ ಒಡೆಯುತ್ತದೆ. 11 ತಿಂಗಳಿಗೆ ಕಟಾವಿಗೆ ಬರುತ್ತದೆ. ಬಾಳೆಗಿಡಗಳು ಮುಂಗಾರಿನಲ್ಲಾಗುವ ಗುಡುಗು ಮಳೆಯಿಂದಾಗಿ ನೆಲಕ್ಕೆ ಬೀಳದಂತೆ ಹಗ್ಗದ ಸಹಾಯದಿಂದ ಮರದಿಂದ ಮರಕ್ಕೆ ಕಟ್ಟುತ್ತಾರೆ. ಒಂದು ಸಲ ಬಾಳೆ ಹಾಕಿ 3 ವರ್ಷ ಫಸಲು ಪಡೆಯುತ್ತಿದ್ದಾರೆ.
ಒಮ್ಮೆ ನಾಟಿ ಮಾಡಿದ ಬಾಳೆ ಕಟಾವಿಗೆ ಬಂದ ನಂತರ ಅದರ ಬುಡದಲ್ಲೇ ಮತ್ತಷ್ಟು ಸಸಿಗಳು ಬೆಳೆಯುತ್ತವೆ. ಅದರಲ್ಲಿ ಯೋಗ್ಯವಾದ ಒಂದನ್ನು ಮಾತ್ರ ಉಳಿಸಿಕೊಂಡು, ಉಳಿದದ್ದೆಲ್ಲವನ್ನೂ ಕಡಿದುಹಾಕಲಾಗುತ್ತದೆ. ರಾಸಾಯನಿಕ ಗೊಬ್ಬರದ ಅವಶ್ಯಕತೆ ಬಾರದಂತೆ ಹೆಚ್ಚು ಸಾವಯವ ಗೊಬ್ಬರ ಉಪಯೋಗಿಸಿ, ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಮೊದಲ ಕಟಾವಿನಲ್ಲಿ ಅಷ್ಟೊಂದು ಉತ್ತಮ ಇಳುವರಿ ಪಡೆಯಲಾಗದಿದ್ದರೂ ತದನಂತರದ ಎರಡು ಕಟಾವುಗಳಲ್ಲಿ ಸಾಕಷ್ಟು ಇಳುವರಿ ದೊರೆಯುತ್ತದೆ ಎನ್ನುತ್ತಾರೆ ಗಂಗಾಧರ್.
ಪಪ್ಪಾಯಿ ಬೆಳೆ ಲಾಭ ತಂದುಕೊಡುವ ಬೆಳೆಯಾಗಿದೆ. ಪಪ್ಪಾಯಿ ಹಾಕಿದ ಭೂಮಿಯಲ್ಲಿ ಮಿಶ್ರ ಬೇಸಾಯ ಮಾಡಲು ಅನುಕೂಲವಾಗಿದೆ. ಇವರು ವರ್ಷದಲ್ಲಿ ಎರಡು ಬಾರಿ ಪಪ್ಪಾಯಿ ಬೆಳೆಯುತ್ತಾರೆ. ಹೀಗೆ ಬೆಳೆದ ಬೆಳೆಗಳಿಂದಲೂ ಆದಾಯ ಬಂದಿದೆ. ಕಬ್ಬು ಇನ್ನಿತರ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ, ಪಪ್ಪಾಯಿಗೆ ಹೆಚ್ಚಿನ ನೀರು ಬೇಕಾಗುವುದಿಲ್ಲ. ಅದೇ ರೀತಿ ರೋಗ ಬಾಧೆ ಕಡಿಮೆ ಇರುತ್ತದೆ ಹಾಗೂ ರಸಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ.
ಬಾಳೆ, ಪಪ್ಪಾಯಿ ಜತೆಗೆ ವಿವಿಧ ಹೂವನ್ನೂ ಬೆಳೆದು ಆದಾಯ ಕಂಡಿದ್ದಾರೆ. ಚೆಂಡೂ ಹೂ (ಮಾರೀಗೋಲ್ಡ್) ಮತ್ತು ಸೇವಂತಿಗೆಯನ್ನು ತಮ್ಮ ಹೊಲದಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ. ಹಬ್ಬದ ಸಂದರ್ಭಗಳನ್ನು ನೋಡಿಕೊಂಡು ಈ ಹೂವಿನ ಗಿಡಗಳನ್ನು ಹಾಕಿ ಆದಾಯ ಗಳಿಸುವುದನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನು ಸೇವಂತಿಗೆ ನೀಡುತ್ತದೆ. ಕಾಲಕಾಲಕ್ಕೆ ನೀರು ಹಾಯಿಸಿ ವಾರಕ್ಕೊಮ್ಮೆ ಗೊಬ್ಬರ, ಕಳೆ ತೆಗೆಯುವುದು ಹಾಗೂ ಹೂ ಕತ್ತರಿಸಿದ ನಂತರ ಔಷಧ ಸಿಂಪಡಣೆ ಮಾಡುತ್ತಾರೆ. ಎರಡ್ಮೂರು ಅಡಿ ಎತ್ತರ ಬೆಳೆದ ಸೇವಂತಿಗೆ ಗಿಡಗಳನ್ನು ಉತ್ತಮ ರೀತಿಯಿಂದ ನಿರ್ವಹಣೆ ಮಾಡಿದರೆ ಅಧಿಕ ಇಳುವರಿ ನಿರೀಕ್ಷಿಸಬಹುದು ಎನ್ನುವುದು ಇವರ ಅಭಿಮತವಾಗಿದೆ.
ರೈತರು ಮಿಶ್ರ ಬೆಳೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಪ್ರಾಮಾಣಿಕತೆ, ಬೆಳೆದ ಬೆಳೆಗಳ ಬಗ್ಗೆ ನಂಬಿಕೆ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದಾಗ ಲಾಭ ಗಳಿಸಲು ಸಾಧ್ಯವಿದೆ.