ಕೃಷಿ ಇಲಾಖೆ ನೇಮಕ ನಿಯಮದಲ್ಲಿ ಮಾರ್ಪಾಡು

Vidhana Soudha vvani
Published on

ಬೆಂಗಳೂರು: ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) ನಿಯಮಗಳು 1999 ಜಾರಿಯಲ್ಲಿರುತ್ತದೆ. 2014ರಲ್ಲಿ ಕೆಲವೊಂದು ತಿದ್ದುಪಡಿ ಮಾಡಲಾಗಿದೆ.

20 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸಮಗ್ರ ಪರಿಷ್ಕರಣೆ ಮಾಡಿಲ್ಲ. ಪ್ರಸ್ತುತ ಅವಧಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗಿದ್ದು, ಕೃಷಿ ಆಯುಕ್ತರು ಹಾಗೂ ಜಲಾನಯನ ಅಭಿವೃದ್ಧಿ ಆಯುಕ್ತರ ಹುದ್ದೆಗಳನ್ನು ಸೇರಿಸಲಾಗಿದೆ. ಸಹಾಯಕ ಕೃಷಿ ನಿರ್ದೇಶಕರು ವೃಂದದ ನೇರ ನೇಮಕ ಮತ್ತು ಮುಂಬಡ್ತಿ ಅನುಪಾತವನ್ನು 30:70 ಬದಲಾಗಿ 20:80 ರಂತೆ ನಿಗದಿಪಡಿಸಲಾಗಿದೆ. ಸಹಾಯಕ ಕೃಷಿ ನಿರ್ದೇಶಕ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ವೃಂದಗಳ ನೇರ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ತೀರ್ವನಿಸಲಾಗಿದೆ.

ಕೃಷಿ ಅಧಿಕಾರಿ ವೃಂದದ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 50:50ರಂತೆ ನಿಗದಿಪಡಿಸಲಾಗಿದ್ದು, ಶೇ.50 ನೇರ ನೇಮಕಾತಿಯಲ್ಲಿ ಶೇ.85 ಕೃಷಿ ಪದವೀಧರರಿಗೆ, ಶೇ.15 ಬಿ.ಟೆಕ್ (ಆಹಾರ ತಂತ್ರಜ್ಞಾನ ಅಥವಾ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ. ಕೃಷಿ ಪದವಿ ಹೊಂದಿಲ್ಲದ ಸಹಾಯಕ ಕೃಷಿ ಅಧಿಕಾರಿಗಳು ಇಲಾಖೆಯಲ್ಲಿ 30-35 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಅವರಿಗೆ ಕೃಷಿ ಅಧಿಕಾರಿಯಾಗಿ ಒಂದು ಬಾರಿಗೆ ಮುಂಬಡ್ತಿ ನೀಡಲು ತೀರ್ವನಿಸಲಾಗಿದೆ. ನಿಯಮಾವಳಿಗೆ ತಿದ್ದುಪಡಿ ತರುವ ಮೂಲಕ ಇಲಾಖೆಯ ಕೆಳಹಂತದ ಅಧಿಕಾರಿಗಳಾದ ಸಹಾಯಕ ಕೃಷಿ ಅಧಿಕಾರಿಗಳನ್ನು ಶೇ.100 ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net