

ಬೆಂಗಳೂರು: ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣ ಸಂಬಂಧಪಟ್ಟಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಹಾಗೂ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ.ಲಿ. ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಹಂತ-2ರ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ರೀಚ್-5ರ ಹಳದಿ ಮಾರ್ಗವು ಹೊಸೂರು ರಸ್ತೆಯಲ್ಲಿನ ಸಂಚಾರ ಸಿಕ್ಕು ತಗ್ಗಿಸಲಿದೆ. ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮ ಕಡಿಮೆಯಾಗಲಿದೆ. ಇದು ಹಳದಿ ಮಾರ್ಗದಲ್ಲಿ 3ನೇ ಒಪ್ಪಂದವಾಗಿದೆ. ಇನ್ಪೋಸಿಸ್ ಫೌಂಡೇಷನ್ ಜತೆ ಕೊನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಹಾಗೂ ಬಯೋಕಾನ್ ಫೌಂಡೇಷನ್ ಜತೆ ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೆ ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಂಡಿದೆ.
ಹಣಕಾಸು ಕಾರ್ಯ ವಿಧಾನದ ಭಾಗವಾಗಿ ಮೆಟ್ರೋ ನಿಗಮಕ್ಕೆ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ.ಲಿ. 65 ಕೋಟಿ ರೂ. ಪಾವತಿಸಿದೆ. ಸರ್ಕಾರದ ಅನುಮೋದನೆ ಪಡೆದ ನಂತರ 30 ವರ್ಷಗಳ ಅವಧಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಾಮಕಾರಣ ಹಕ್ಕು ನೀಡಲಿದೆ. ತೈವಾನೀಸ್ ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆಯ ಅಧೀನದ ಈ ಕಂಪನಿ, ಪರಿಸರ ಸ್ಥಿರತೆಗೆ ಬದ್ಧತೆ ಹೊಂದಿದೆ. ಕಂಪನಿ ಎಂಡಿ ನಿರಂಜನ್ ನಾಯಕ್ ಮತ್ತಿತರರಿದ್ದರು.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ.ಲಿ. ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ತಮ್ಮ ಬೆಂಬಲದೊಂದಿಗೆ ಮುಂದೆ ಬಂದಿರುವುದಕ್ಕೆ ಸಂತಸವಾಗಿದೆ. ಮೆಟ್ರೋ ಕಾರಿಡಾರ್ಗಳ ಉದ್ದಕ್ಕೂ ನಗರದ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಇತರ ಕಾಪೋರ್ರೇಟ್ ಸಂಸ್ಥೆಗಳು ಕೈಜೋಡಿಸುವಂತಾಗಲಿ.
| ಎಂ.ಮಹೇಶ್ವರರಾವ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ.