

ಹಾವೇರಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಯಡಿ ಸೆ. 1ರಿಂದ 20ರವರೆಗೆ ನಗರದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ. ನೇಮಕಾತಿ ರ್ಯಾಲಿಗೆ ಅಗತ್ಯವಾದ ಮೂಲ ಸೌಕರ್ಯಗಳ ಸಿದ್ಧತೆಗೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವಸಿದ್ಧತೆ ಕುರಿತು ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ ಕುರಿತು ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಸ್ಥಳ ನಿಗದಿಪಡಿಸಲಾಗಿದೆ. ಅಗ್ನಿಪಥ ಯೋಜನೆಯಡಿ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, 50 ಸಾವಿರದಷ್ಟು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪ್ರತಿದಿನ 2,500ರಿಂದ 3 ಸಾವಿರ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎಂದರು.
ಎಸ್ಪಿ ಹನುಮಂತರಾಯ, ಅಗ್ನಿಪಥ ನೇಮಕಾತಿ ವಿಭಾಗದ ಅಧಿಕಾರಿ ಮೇಜರ್ ಸುನೀಲಕುಮಾರ ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಡಿಎಫ್ಒ ಬಾಲಕೃಷ್ಣ, ಎಎಸ್ಪಿ ವಿಜಯಕುಮಾರ ಸಂತೋಷ, ಧಾರವಾಡ ವಿಭಾಗದ ಸೈನಿಕ ಪುನರ್ವಸತಿ ಹಾಗೂ ಕಲ್ಯಾಣಾಧಿಕಾರಿ ಲೋಲಾಕ್ಷ, ಜಿಪಂ ಉಪಕಾರ್ಯದರ್ಶಿ
ಎಸ್.ಜಿ. ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಸುಬೇದಾರ್ ಮೇಜರ್ ಟಿ. ಹಸನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.