ಅನಾರೋಗ್ಯಕ್ಕೆ ಬೇಸತ್ತು ವೃದ್ಧ ಗಂಡ-ಹೆಂಡತಿ ಇಬ್ಬರೂ ಆತ್ಮಹತ್ಯೆ

Suicide 9 Jul 20
Published on

ಸಿದ್ಧಾಪುರ: ಅನಾರೋಗ್ಯ ಒಮ್ಮೊಮ್ಮೆ ಎಂಥವರನ್ನೂ ಹೈರಾಣಾಗಿಸಿ ಬೇಸತ್ತು ಹೋಗುವಂತೆ ಮಾಡುತ್ತದೆ. ಅಂಥ ಅನಾರೋಗ್ಯದಿಂದಾಗಿ ವೃದ್ಧ ಗಂಡ-ಹೆಂಡತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಕಾನಗೋಡ ಗುತ್ತಿಮನೆಯಲ್ಲಿ ಸೋಮವಾರ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ಕೃಷಿ ಕೆಲಸ ಮಾಡುತ್ತಿದ್ದ ದತ್ತ ರಾಮಾ ಶೇಟ್​ (69) ಹಾಗೂ ಅವರ ಪತ್ನಿ ಪದ್ಮಾವತಿ ದತ್ತ ಶೇಟ್​ (58) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಮಲಗಿದ್ದ ಇಬ್ಬರೂ ಬೆಳಗ್ಗೆ ಮಕ್ಕಳು ಎದ್ದು ನೋಡುವ ಹೊತ್ತಿಗೆ ಶವವಾಗಿದ್ದರು. ಇಬ್ಬರೂ ಮನೆಯ ಜಗುಲಿಯ ತೊಲೆಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದರು.

ಗಂಡ-ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ವಯೋಸಹಜ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಮಂಡಿನೋವು ಮುಂತಾದವು ಇಬ್ಬರನ್ನೂ ಬಾಧಿಸುತ್ತಿದ್ದವು. ಅದರಿಂದ ಬೇಸತ್ತಿದ್ದ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಮಕ್ಕಳು ಹೇಳಿಕೆ ನೀಡಿದ್ದಾರೆ. ಸಿದ್ಧಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net