

ಹಾವೇರಿ: ಕಟ್ಟುನಿಟ್ಟಿನ ಲಾಕ್ಡೌನ್ ಮಧ್ಯೆಯೂ ಅಗತ್ಯವಸ್ತುಗಳ ಖರೀದಿಗೆ ಭಾನುವಾರ ನೀಡಿದ್ದ ಅವಕಾಶದಲ್ಲೂ ನಿಯಮ ಉಲ್ಲಂಘನೆ ಕಂಡುಬಂದಿತು.
ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮೇ 21ರಿಂದ 25ರವರೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಭಾನುವಾರ ಮಾತ್ರ ಬೆಳಗ್ಗೆ 6ರಿಂದ 10 ಗಂಟೆವರೆಗೆ ದಿನಸಿ, ತರಕಾರಿ ಸೇರಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಜನ ಸಿಕ್ಕ ಅವಕಾಶವನ್ನೇ ದುರ್ಬಳಕೆ ಮಾಡಿಕೊಂಡು ಮುಗಿಬಿದ್ದು ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ, ಪಟ್ಟಣಗಳಲ್ಲೂ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಬೆಳಗ್ಗೆ 6 ಗಂಟೆಯಿಂದಲೇ ದಿನಸಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತು ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನ ಹಾಗೂ ವಾಹನಗಳ ಓಡಾಟ ಹೆಚ್ಚಿತ್ತು. ರಸ್ತೆಯ ಎರಡೂ ಕಡೆ ಬೈಕ್ಗಳು ಸಾಲುಗಟ್ಟಿ ನಿಂತಿದ್ದವು. ತರಕಾರಿ, ಹಣ್ಣು ಖರೀದಿಯೂ ಜೋರಾಗಿತ್ತು.
ಪ್ರಮುಖ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ಗಳಲ್ಲಂತೂ ಜನ ಪರಸ್ಪರ ಅಂತರ ಮರೆತು ವರ್ತಿಸುತ್ತಿದ್ದರು. ಖರೀದಿ ಭರಾಟೆಯಲ್ಲಿ ನಿಯಮ ಗಾಳಿಗೆ ತೂರಿದ್ದರು. ವ್ಯಾಪಾರಸ್ಥರೂ ಸಿಕ್ಕದ್ದೇ ಅವಕಾಶ ಎಂಬಂತೆ ವಹಿವಾಟು ನಡೆಸಿದರು. ಕೃಷಿ ಪರಿಕರ, ಬೀಜ ಗೊಬ್ಬರಗಳ ಅಂಗಡಿಗಳ ಎದುರೂ ರೈತರು ಗುಂಪುಗೂಡಿದ್ದರು. ಬೆಳಗ್ಗೆ 10 ಗಂಟೆವರೆಗೂ ಇದೇ ರೀತಿಯ ವಾತಾವರಣ ಕಂಡುಬಂತು.
9ರ ನಂತರ ಬಂದೋಬಸ್ತ್: ಮಾರುಕಟ್ಟೆಗೆ ಬಂದಿದ್ದವರನ್ನು 9 ಗಂಟೆಯಿಂದಲೇ ವಾಪಸ್ ಕಳುಹಿಸುವ ಕಾರ್ಯ ಶುರು ಮಾಡಿದ ಪೊಲೀಸರು, 10 ಗಂಟೆಯ ಬಳಿಕ ಬೈಕ್ ಸವಾರರಿಗೆ ದಂಡ, ವಾಹನ ಜಪ್ತಿ ಮಾಡುವ ಮೂಲಕ ಬಿಸಿ ಮುಟ್ಟಿಸಿದರು. ನೂರಾರು ವಾಹನಗಳನ್ನು ವಶಕ್ಕೆ ತೆಗೆದುಕೊಂಡು, ಮಾಸ್ಕ್ ಕೇಸ್ ಹಾಕಿ ದಂಡ ವಿಧಿಸಿದರು. 10 ಗಂಟೆ ನಂತರವೂ ಜನರ ಓಡಾಟ ನಡೆದೇ ಇತ್ತು. ಭಾನುವಾರ ಹತ್ತಾರು ಕಡೆ ಮದುವೆ ಸಮಾರಂಭಗಳೂ ನಡೆದಿವೆ. ಮನೆಯಲ್ಲೇ ಕಾರ್ಯಕ್ರಮ ಇಟ್ಟುಕೊಂಡಿದ್ದರೂ ನೂರಾರು ಜನ ಸೇರಿರುವುದು ಕಂಡುಬಂದಿತು. ಕರೊನಾ ನಿಯಂತ್ರಣಕ್ಕೆ ಜನರು ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ಹೇಳುತ್ತಿದ್ದರೂ ಜನರು ಕೇಳುತ್ತಿಲ್ಲ. ಅಗತ್ಯ ವಸ್ತು ಖರೀದಿ ನೆಪದಲ್ಲಿ ಮನೆಯಿಂದ ಹೊರಬೀಳುತ್ತಲೇ ಇದ್ದಾರೆ. ಸೋಮವಾರ ಮತ್ತೆ ಕಟ್ಟುನಿಟ್ಟಿನ ಲಾಕ್ಡೌನ್ ಮುಂದುವರಿಯಲಿದೆ.