ಕುಣಿಗಲ್ ಸ್ಟಡ್‌ಫಾರ್ಮ್‌ನಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಆಕ್ರೋಶ

Stud_Farm
Published on

ಕುಣಿಗಲ್: ಕುಣಿಗಲ್ ಪಟ್ಟಣದಲ್ಲಿರುವ ಐತಿಹಾಸಿಕ ಸ್ಟಡ್ ಫಾರ್ಮ್ 421ಎಕರೆ ಫಲವತ್ತಾದ ಭೂಮಿ ಮೇಲೆ ರಾಜಕಾರಣಿಗಳು, ಕಾರ್ಪೋರೇಟ್ ಸಂಸ್ಥೆಗಳ ಕಣ್ಣು ಬಿದ್ದಿದೆ.

ಸ್ಟಡ್ ಫಾರ್ಮ್ ಜಾಗದಲ್ಲಿ ಐಟಿ ಪಾರ್ಕ್ ಹಾಗೂ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರದ ಮೇಲೆ ಸ್ಥಳೀಯ ಶಾಸಕ ಡಾ.ಎಚ್.ಡಿ.ರಂಗನಾಥ್ ಒತ್ತಡ ತಂದಿರುವ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ.

ಪಶು ಸಂಗೋಪನಾ ಇಲಾಖೆ ವಶದಲ್ಲಿರುವ ಬೆಲೆಬಾಳುವ ಭೂಮಿಯನ್ನು ರಿಯಲ್ ಎಸ್ಟೇಟ್‌ಗಳಿಗೆ ನೀಡದೆ ರೈತರಿಗೆ, ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ ಅಥವಾ ಪಶುಸಂಗೋಪನೆಗೆ ಸಂಬಂಧಿಸಿದ ವಿವಿ, ಸಂಶೋಧನಾ ಕೇಂದ್ರಗಳು ಮಾತ್ರ ಆರಂಭಿಸಬೇಕು ಎಂಬ ಒಕ್ಕೊರಲ ಕೂಗೆದ್ದಿದೆ.

ಈ ಬಗ್ಗೆ ಚರ್ಚಿಸಲು ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಬುಧವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದು ಹೋರಾಟ ತೀವ್ರಗೊಳ್ಳುವ ಸಾಧ್ಯತೆಯಿದೆ.

ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಸಂಬಂಧ ಬೆಳಗಾವಿ ಸುವರ್ಣ ಸೌಧದಲ್ಲಿ ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಈ ಮಹತ್ವದ ಸಭೆಯ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿಯೂ ಹಂಚಿಕೊಂಡಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ.

ಸ್ಟಡ್ ಫಾರ್ಮ್ಉಳಿವಿಗಾಗಿ ನೂತನವಾಗಿ ಪರಂಪರಿಕ ಕುಣಿಗಲ್ ಕುದುರೆ ಫಾರ್ಮ್ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು. ಈ ಮೂಲಕ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲು ಸಭೆ ತಿರ್ಮಾನಿಸಿತು.

ಸಭೆಯಲ್ಲಿ ಕುಣಿಗಲ್ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬೈ.ಎಚ್.ಹುಚ್ಚಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಡಿ.ರಾಜೇಶ್‌ಗೌಡ, ತಾಲೂಕು ಅಧ್ಯಕ್ಷ ಬಲರಾಮ್, ಕಸಪಾ ಅಧ್ಯಕ್ಷ ರಮೇಶ್, ಮುಖಂಡರಾದ ಜಿ.ಕೆ.ನಾಗಣ್ಣ, ರಘುಜಾಣಗೆರೆ, ರಾಜುವೆಂಕಟಪ್ಪ, ಕೃಷ್ಣರಾಜು, ಹುಚ್ಚೇಗೌಡ, ಶಿವಶಂಕರ್, ವಕೀಲರಾದ ಶಿವಶಂಕರ್, ಬಿ.ಎನ್.ಜಗದೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net