

ಆಲೂರು: ಎರಡು ವರ್ಷಗಳ ಬಳಿಕ ಆಲೂರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ತಾಹೇರ ಬೇಗಂ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಸಭೆ ನಡೆದು ಹಲವು ವಿಚಾರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ನೂತನ ಅಧ್ಯಕ್ಷೆ ತಾಹೇರ ಬೇಗಂ ಮಾತನಾಡಿ, ಪಟ್ಟಣದ ಅಭಿವೃದ್ಧಿ ದಿಸೆಯಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಮತದೊಂದಿಗೆ ಉತ್ತಮ ಆಡಳಿತ ನೀಡಲು ಸಂಕಲ್ಪ ಮಾಡಲಾಗಿದೆ. ಪಟ್ಟಣದಲ್ಲಿ ತಲೆದೋರಿರುವ ಪಾರ್ಕಿಂಗ್, ಬೀದಿ-ದೀಪ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸದಸ್ಯ ಹರೀಶ್ ಮಾತನಾಡಿ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಗುರುತಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್ ಪ್ರತಿಕ್ರಿಯಿಸಿ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವನ್ನು ಗುರುತಿಸಿ ಪೊಲೀಸ್ ಇಲಾಖೆ ಸಹಾಯದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸದಸ್ಯ ಧರ್ಮ ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಪರವಾನಿಗೆಯನ್ನು ಪಡೆಯದೆ ಮತ್ತು ಯಾವುದೇ ಬಾಡಿಗೆಯನ್ನು ಕಟ್ಟದೆ ಕಳೆದ 20 ವರ್ಷಗಳಿಂದ ಕೋಳಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಳೆದ ಸಭೆಯಲ್ಲಿ ಕ್ಷೇತ್ರದ ಶಾಸಕರು ಹೇಳಿರುವಂತೆ ಪಟ್ಟಣ ಪಂಚಾಯಿತಿಯಿಂದ ಅವರಿಗೆ ಯಾವುದೇ ಮೂಲಸೌಕರ್ಯ ನೀಡಕೂಡದು ಕೂಡಲೇ ನೀರಿನ ಸಂಪರ್ಕ ಕಡಿತಗೊಳಿಸಬೇಕು. ಕಸ ವಿಲೇವಾರಿಗೆ ಪಟ್ಟಣ ಪಂಚಾಯಿತಿ ವಾಹನ ಕಳುಹಿಸಬಾರದು ಎಂದು ಹೇಳಿದರು.
ನೂತನ ಅಧ್ಯಕ್ಷೆ ತಾಹೇರ ಬೇಗಂ ಮಾತನಾಡಿ, ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ನೀರಿನ ಸಂಪರ್ಕ ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ. ಕೋಳಿ ಅಂಗಡಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಸದ್ಯದಲ್ಲೇ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸದಸ್ಯ ತೌಫಿಕ್ ಅಹಮದ್ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿರುವ ಪೌರಕಾರ್ಮಿಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸದರು.
ಸದಸ್ಯೆ ಬಿ.ಪಿ. ರಾಣಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮತ್ತು ಮಂಗಗಳ ಹಾವಳಿ ಹೆಚ್ಚಾಗಿದೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸದಸ್ಯ ಸಂತೋಷ್ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಸುರಿದ ಅತಿವೃಷ್ಟಿ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಈವರೆಗೂ ಪರಿಹಾರ ನೀಡದಿರುವುದು ವಿಪರ್ಯಾಸ. ಕೂಡಲೇ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯ ಹರೀಶ್, ಧರ್ಮ, ಸಂತೋಷ್, ಅಬ್ದುಲ್ ಖುದ್ದೂಸ್, ಬಿ.ಪಿ. ರಾಣಿ, ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಮುಖ್ಯ ಇಂಜಿನಿಯರ್ ಕವಿತಾ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.