ಬದುಕಿಗೆ ಆಸರೆಯಾದ ಚೆಂಡು ಹೂವು

chendu hoo
Published on

* ಲಾಭದತ್ತ ಮುಖ ಮಾಡಿರುವ ನೆಲಮಲೆ ಯುವ ರೈತರು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹಬ್ಬಗಳಲ್ಲಿ ಹೂವುಗಳದ್ದೆ ಕಾರುಬಾರು. ಹೂವು ಇಲ್ಲದಿದ್ದರೆ ಹಬ್ಬವಿಲ್ಲ. ಅಂತೆಯೇ, ಯುವ ರೈತರಿಬ್ಬರು ಆಯುಧಪೂಜಾ, ವಿಜಯದಶಮಿ ಹಬ್ಬಕ್ಕೆಂದೇ ಚೆಂಡು ಹೂವು ಬೆಳೆದು ಲಾಭ ಕಂಡಿದ್ದಾರೆ.

ಕೈಲಾಂಚ ಹೋಬಳಿಯ ಹುಲಿಕೆರೆ&ಗುನ್ನೂರು ಗ್ರಾಪಂ ವ್ಯಾಪ್ತಿಯ ನೆಲಮಲೆ ಗ್ರಾಮದ ನವೀನ್​ ಮತ್ತು ಅಜಯ್​ ಎಂಬ ಯುವ ರೈತರಿಬ್ಬರು ಜಮೀನಿನಲ್ಲಿ ಹೂವು ಕೃಷಿಯಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಆಯುಧಪೂಜಾ ಹಬ್ಬದಲ್ಲಿ ವಾಹನಗಳ ಅಲಂಕಾರಕ್ಕೆ ಬೇಕಾಗುವ ಚೆಂಡೂ ಹೂವು ಹಳದಿ ಮತ್ತು ಕೆಂಪು ಹೂವುಗಳನ್ನು ಬೆಳೆದು ಮಾರುಕಟ್ಟೆಗೆ ಅಣಿಗೊಳಿಸಲು ಮುಂದಾಗಿದ್ದಾರೆ.

ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲಷ್ಟೇ ಹೆಚ್ಚಾಗಿ ಬೆಳೆಯುತ್ತಿದ್ದ ಚೆಂಡು ಹೂವನ್ನು ರಾಮನಗರ ಜಿಲ್ಲೆಯಲ್ಲಿಯೂ ಬೆಳೆಯಲು ಮುಂದಾಗಿರುವ ಯುವ ರೈತರು ತಲಾ 15 ಗುಂಟೆ ಜಮೀನಿನಲ್ಲಿ ಬೆಳೆದಿದ್ದು, ಹಳದಿ, ಕೆಂಪು ಚೆಂಡು ಹೂವುಗಳು ಕಣ್ಣಿಗೆ ಹಬ್ಬತರಿಸಿವೆ. ಅರ್ಕಾವತಿ ನದಿ ತೀರದ ಹುಲಿಕೆರೆ, ಗುನ್ನೂರು, ವಡ್ಡರಹಳ್ಳಿ ಭಾಗಗಳಲ್ಲಿ ಕೆಲವೇ ಕೆಲವು ರೈತರು ಕಾಕಡ, ಕನಕಾಂಬರ ಹೂವು ಕೃಷಿ ನಡೆಸುತ್ತಾರೆ. ಚೆಂಡು ಹೂವು ಕೃಷಿ ಜತೆಗೆ ರೇಷ್ಮೆ ಮತ್ತಿತರ ಬೆಳೆ ಬೆಳೆಯುತ್ತಿದ್ದಾರಲ್ಲದೆ ಹೈನುಗಾರಿಕೆಯನ್ನೂ ಕೈಗೊಂಡಿದ್ದಾರೆ.

ಚೆಂಡು ಹೂವು ಮಾರುಕಟ್ಟೆಯಲ್ಲಿ ಪ್ರಸ್ತುತ ಕೆಜಿಗೆ 70 ರಿಂದ 80 ರೂ. ಇದೆ. ಹಬ್ಬದ ದಿನಗಳಲ್ಲಿ 130 ರಿಂದ 150 ದಾಟಬಹುದು. ಕಳೆದ ವರ್ಷ ಹಬ್ಬದ ದಿನಗಳಲ್ಲಿ 150 ರಿಂದ 180 ರೂ.ವರೆಗೆ ಮಾರಾಟವಾಗಿತ್ತು. ಅಂತೆಯೇ, ಈ ಬಾರಿಯೂ ದರ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹೂವು ವ್ಯಾಪಾರಿ ಸುರೇಶ್​.

ಹೂವು ಕೃಷಿ ತುಂಬಾ ಇಷ್ಟ. ರೇಷ್ಮೆ, ಪಪ್ಪಾಯ ತೋಟದ ಬೆಳೆ ಜತೆಯಲ್ಲೇ ಒಂದಷ್ಟು ಲಾಭ ಆಯುಧಪೂಜೆ, ವಿಜಯದಶಮಿಯಲ್ಲಿ ಸಿಗಬಹುದು ಎಂಬ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಚೆಂಡುಹೂವು ಬೆಳೆ ಬೆಳೆಯಲಾಗುತ್ತಿದೆ.

> ನವೀನ್​

ರೈತ, ಚೆಂಡು ಹೂವು ಬೆಳೆಗಾರ, ನೆಲಮಲೆ

ಚೆಂಡು ಹೂವು ಕೃಷಿ ಮೂರೂವರೆ ತಿಂಗಳ ಅಲ್ಪಾವಧಿ ಬೆಳೆ. ಕಡಿಮೆ ನೀರಿನಲ್ಲಿ ಬೆಳೆ ಬೆಳೆಯಬಹುದು. ಕಡಿಮೆ ಅವಧಿಯಲ್ಲಿ ಒಂದಷ್ಟು ಲಾಭ ಸಿಗುತ್ತದೆ ಎಂಬ ನಿರೀೆ ಇದೆ. ಆದರೆ, ಬೇರೆ ಜಿಲ್ಲೆಯ ಹೂವು ಮಾರುಕಟ್ಟೆ ಪ್ರವೇಶಿಸಿದರೆ ನಷ್ಟವೂ ಉಂಟಾಗುವ ಆತಂಕ ಕೂಡ ಇದೆ.

> ಅಜಯ್​, ರೈತ, ಚೆಂಡು ಹೂವು ಬೆಳೆಗಾರ, ನೆಲಮಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net