

ತುಮಕೂರು: ಹಾಡಹಾಗಲೇ ಕಲಬುರ್ಗಿ ವಕೀಲ ಈರಣ್ಣಗೌಡ ಪಾಟೀಲ್ ಹತ್ಯೆ ಖಂಡಿಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಕೆಂಪರಾಜಯ್ಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೊಲೆ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಕೀಲರಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಎಚ್.ಕೆಂಪರಾಜಯ್ಯ, ಕಲಬುರ್ಗಿಯಲ್ಲಿ ನಡೆದ ಘಟನೆ ಅಮಾನುಷವಾದುದು. ವಕೀಲರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಳೆದವಾರ ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೋಲೀಸರೇ ಹಲ್ಲೇ ಮಾಡಿದ್ದಾರೆ. ಪದೇ ಪದೇ ವಕೀಲರ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆಯುತ್ತಿದ್ದು ವಕೀಲರಿಗೆ ಸೂಕ್ತ ರಕ್ಷಣೆಗೆ ತಕ್ಷಣವೇ ರಾಜ್ಯ ಸರ್ಕಾರ ಧಾವಿಸಬೇಕು. ವಕೀಲರ ರಕ್ಷಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ, ಖಜಾಂಚಿ ಕೆ.ಎಲ್.ಭಾರತಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್, ಟಿ.ಎಸ್.ಜನಾರ್ಧನ್, ಎಸ್.ಮೋಹನ್, ಶಿವಕುಮಾರಸ್ವಾಮಿ, ಎಂ.ಬಿ.ನವೀನ್ ಕುಮಾರ್, ಪಿ.ಎಸ್.ಸಂದೀಪ್, ಎಚ್.ಎಸ್.ಮಂಜುಳ ಮತ್ತಿತರರು ಭಾಗವಹಿಸಿದ್ದರು.