ಜನಪರ ವಕಾಲತ್ತು ವಹಿಸಿ ನ್ಯಾಯ ಕೊಡಿಸಿ

14 KKP 1
ಕನಕಪುರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎನ್.ಕುಮಾರ್, ಸಚಿವ ರಾಮಲಿಂಗರೆಡ್ಡಿ, ಸಂಸದ ಡಾ.ಸಿ.ಎನ್.ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಎ.ಸಿ.ಚನ್ನೇಗೌಡ, ಕಾರ್ಯದರ್ಶಿ ನಾರಾಯಣ್, ವಕೀಲರ್ ಎ.ಆರ್.ಖಾನ್ ಇದ್ದರು.
Published on

ವಕೀಲರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ - ಕನಕಪುರದಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಕನಕಪುರ: ನ್ಯಾಯಾಂಗದ ಮೇಲೆ ನನಗೆ ಅಪಾರ ನಂಬಿಕೆ ಇದೆ. ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡುವಂತೆ ನ್ಯಾಯ ಸಿಗುವ ನಂಬಿಕೆಯಿಂದ ನ್ಯಾಯಾಲಯಕ್ಕೂ ಜನ ಬರುತ್ತಾರೆ. ಅಂತಹವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ವಕೀಲರದ್ದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ. ನ್ಯಾಯಮೂರ್ತಿ ನಾಗರತ್ನ ಅವರಿಲ್ಲದಿದ್ದರೆ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ. ಇದೇ ತಾಲೂಕಿನವರಾದ ಅವರು ಜಿಲ್ಲಾ ಮುಖ್ಯನ್ಯಾಯಾಧೀಶರಾಗಿದ್ದರು. ಅವರ ತಂದೆ ವೆಂಕಟರಮಣಯ್ಯ ನಮ್ಮ ಊರಿನ ಅಳಿಯ. ಅವರೂ ಮುಖ್ಯ ನ್ಯಾಯಾಧೀಶರಾಗಿದ್ದರು. ನಾಗರತ್ನ ಅವರು ಈ ಜಾಗಕ್ಕೆ ಬಂದು, ಇಲ್ಲಿನ ಸಮಸ್ಯೆ ಅರಿತು ಅದನ್ನು ಬಗೆಹರಿಸಿ ಆದೇಶ ಹೊರಡಿಸಿದರು ಎಂದು ಸ್ಮರಿಸಿದ ಡಿಸಿಎಂ ರಾಮನಗರದಲ್ಲೂ ನ್ಯಾಯಾಲಯ ಕಟ್ಟಡ ನಿರ್ಮಿಸಬೇಕಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಕನಕಪುರದಲ್ಲಿರುವ 240 ವಕೀಲರು ಬೆಂಗಳೂರಿನಲ್ಲಿ ಬದುಕಬೇಕು ಎಂದು ಬಯಸುತ್ತಾರೆ. ಆದರೆ ತಾಲೂಕಿನ ಜನರಿಗಾಗಿ ಸೇವೆ ಮಾಡುತ್ತಿದ್ದು, ಜನಪರ ವಕಾಲತು ವಹಿಸಬೇಕು. ನಿಮ್ಮ ಏನೇ ಸಮಸ್ಯೆ ಇದ್ದರೂ ಬಗೆಹರಿಸುವೆ ಎಂದು ಭರವಸೆ ನೀಡಿದರು.

ಬೆಂಗಳೂರಿನಂತೆ ಸೌಕರ್ಯ

ಕನಕಪುರ ಪಟ್ಟಣ ಈ ಹಿಂದೆ ಹೇಗಿತ್ತು? ಈಗ ಹೇಗಾಗಿದೆ?, ಇನ್ಮುಂದೆ ಯಾವ ರೀತಿ ಆಗಲು ಸಾಧ್ಯ? ಎಂದು ನೀವೇ ನೋಡಬೇಕು. ಪ್ರತಿ ಹಳ್ಳಿಯಲ್ಲೂ ಬೆಂಗಳೂರಿನಲ್ಲಿರುವಂತೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದ ಡಿಕೆಶಿ, ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶ ಬಳಸಿಕೊಂಡು ನಾವು ಯಾವ ರೀತಿ ಸಹಾಯ ಮಾಡುತ್ತೇವೆ ಎಂಬುದು ಮುಖ್ಯ ಎಂದು ಪುನರುಚ್ಚರಿಸಿದರು.

ನನ್ನನ್ನು ಕ್ಷಮಿಸಿ!

ನಾನು ಕಾಂಗ್ರೆಸ್ ಅಧ್ಯಕ್ಷನಾದ ಬಳಿಕ ಕನಕಪುರದಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡಲು ಆಗಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೀಗಾಗಿ ನಾಳೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಚೇರಿಯಲ್ಲಿ, ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಬೆಂಗಳೂರು ನಗರದಲ್ಲಿ ಧ್ವಜಾರೋಹಣ ಮಾಡಬೇಕಿದೆ. ಹೀಗಾಗಿ ನನ್ನನ್ನು ಕ್ಷಮಿಸಿ ಎಂದು ಡಿಕೆಶಿ ಕೇಳಿಕೊಂಡರು.

ನನಗೂ ವಕೀಲನಾಗುವ ಆಸೆ ಇತ್ತು

ನಾನು ವಿದ್ಯಾರ್ಥಿಯಾಗಿದ್ದಾಗ ವಕೀಲನಾಗಬೇಕೆಂಬ ಆಸೆ ಇತ್ತು. ಆದರೆ ಪದವಿ ಓದುತ್ತಿರುವಾಗಲೇ ನನಗೆ ಪಕ್ಷದ ಟಿಕೆಟ್ ನೀಡಲಾಯಿತು. ಹೀಗಾಗಿ ನಾನು ನನ್ನ ಮಗನನ್ನು ಕಾನೂನು ಓದಿಸುತ್ತಿದ್ದೇನೆ. ನನಗೆ ದಿನ ಬೆಳಗಾದರೆ ನ್ಯಾಯಾಲಯದ ನೋಟಿಸ್ ಬರುತ್ತಿರುತ್ತವೆ. ಹಾಗಾಗಿ ನೀನಾದರೂ ವಕೀಲನಾಗು ಎಂದು ಮಗನಿಗೆ ಹೇಳಿರುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಆದರೂ ಸಾಮಾನ್ಯ ಸೇವಕ

ನಾನು ಕಳೆದ 35 ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಯಾಗಿದ್ದೇನೆ. ಈಗ ಡಿಸಿಎಂ ಆದರೂ ಕನಕಪುರಕ್ಕೆ ಬಂದರೆ ಸಾಮಾನ್ಯ ಸೇವಕ. ಇಲ್ಲಿನ ಜನ ನನಗೆ ಪ್ರೀತಿ, ಶಕ್ತಿ ನೀಡಿ, ಮನೆ ಮಗನಂತೆ ಬೆಳೆಸಿದ್ದಾರೆ. ಸತತ 8 ಬಾರಿ ವಿಧಾನಸಭೆಗೆ ಕಳುಹಿಸಿದ್ದಾರೆ. ತಾಲೂಕು ಹಾಲು ಹಾಗೂ ರೇಷ್ಮೆ ಉತ್ಪಾದನೆಗೆ ಹೆಸರುವಾಸಿ. ಅದರಲ್ಲೂ ಶ್ರೇಷ್ಠ ರೇಷ್ಮೆ ಬೆಳೆಯುವ ಜತೆಗೆ ಗುಜರಾತ್ ನಂತರ ಇಲ್ಲಿಯೇ ದೊಡ್ಡ ಡೇರಿ ಇದೆ. ಬೆಂಗಳೂರಿಗೆ ಕುಡಿಯಲು ಕಾವೇರಿ ನೀರನ್ನು ನಮ್ಮ ಭಾಗದ ಮೂಲಕವೇ ಹರಿಸಲಾಗುತ್ತಿದೆ ಎಂದು ಡಿಕೆಶಿ ಸ್ವಕ್ಷೇತ್ರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net