ಸಲಹೆಗಾರರು ಬೇಕಾಗಿದ್ದಾರೆ; ಕಾರಂತ ಬಡಾವಣೆ ರಚನೆಗೆ ಸಲಹೆಗಾರರ ನೇಮಕಕ್ಕೆ ಟೆಂಡರ್

BDA Shivarama Karantha
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆ ರಚನೆ ಹಿನ್ನೆಲೆಯಲ್ಲಿ ಪರಿಸರ ಸಂಬಂಧಿತ ಅನುಮತಿ ನೀಡಿಕೆ ಸೇವೆ ಪಡೆಯಲು ಸಲಹೆಗಾರರ ನೇಮಕಕ್ಕೆ ಟೆಂಡರ್ ಆಹ್ವಾನಿಸಿದೆ.

ಈ ಬಡಾವಣೆ ವ್ಯಾಪ್ತಿಯಲ್ಲಿ ಅರಣ್ಯ, ಜಲಮೂಲ ಹಾಗೂ ಇತರ ಪರಿಸರ ಪೂರಕ ಚಟುವಟಿಕೆಗಳು ನಡೆದಿವೆ. ಇವು ಲೇಔಟ್ ರಚನೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ನಂತರವೇ ಕಾಮಗಾರಿ ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಕಾರಣಕ್ಕಾಗಿ ಬಿಡಿಎ ಸಲಹೆಗಾರರನ್ನು ನೇಮಿಸಿಕೊಂಡು ಪರಿಸರ ಉಸ್ತುವಾರಿ ಸೇವೆಯನ್ನು ಮೂರು ವರ್ಷ ಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಆಸಕ್ತ ಸಂಸ್ಥೆಯಿಂದ ಟೆಂಡರ್ ಪಡೆದು ಅದನ್ನು ಪರಾಮರ್ಶಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.

ಪರಿಸರ ಪರಿಣಾಮದ ಅಧ್ಯಯನ: ಯಲಹಂಕ ಹಾಗೂ ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 17 ಹಳ್ಳಿಗಳಿಗೆ ಸೇರಿದ ಒಟ್ಟು 3,546 ಎಕರೆ 12 ಗುಂಟೆ ಜಮೀನು ವಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಜಮೀನಿನ ಭೂಮಾಲೀಕರಿಗೆ ಪರಿಹಾರವಾಗಿ ಶೇ.40 ಅಭಿವೃದ್ಧಿಪಡಿಸಿದ ನಿವೇಶನ ನೀಡಲಾಗುತ್ತದೆ. ಇದರ ಹೊರತಾಗಿಯೂ ಲೇಔಟ್ ವ್ಯಾಪ್ತಿಯಲ್ಲಿನ ಹಲವು ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದ ಕೃಷಿ ಹಾಗೂ ತೋಟಗಾರಿಕೆ ಜಮೀನಿದೆ. ಜತೆಗೆ ನರ್ಸರಿ, ಕೈಗಾರಿಕೆ ಘಟಕಗಳು, ಕೆರೆ-ಕಟ್ಟೆಗಳೂ ಇವೆ. ಬಿಬಿಎಂಪಿಗೆ ಹೊಂದಿಕೊಂಡಂತೆ 400ಕ್ಕೂ ಹೆಚ್ಚು ವಿಸ್ತೀರ್ಣ ಜಾರಕ್‌ಬಂಡೇ ಕಾವಲ್ ಅರಣ್ಯವಿದೆ. ಜತೆಗೆ ಇದೇ ಪ್ರದೇಶದಲ್ಲಿ ಪೆರಿಫೆರಲ್​ ರಿಂಗ್ ರಸ್ತೆ (ಪಿಆರ್‌ಆರ್) ಹಾದುಹೋಗಲಿದೆ.

ಈ ಎಲ್ಲದರ ಬೆಳವಣಿಗೆಯಿಂದಾಗಿ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಉಂಟಾಗುವ ಸಾಧ್ಯತೆಯನ್ನು ಊಹಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ. ನ್ಯಾಯಾಲಯ ಹಾಗೂ ಕೇಂದ್ರ ಪರಿಸರ ಸಚಿವಾಲಯ ಕೂಡ 16 ಅಂಶಗಳ ಪರಿಸರ ಪೂರಕ ಅಂಶಗಳನ್ನು ಪರಾಮರ್ಶಿಸಿದ ಬಳಿಕವೇ ಬಡಾವಣೆ ರಚನೆಗೆ ಮುಂದಡಿ ಇಡಬೇಕು ಎಂಬ ಷರತ್ತು ವಿಧಿಸಿರುವುದರಿಂದ ಪ್ರಾಧಿಕಾರವು ಈ ಉಪಕ್ರಮಕ್ಕೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net