ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಲಹೆ

Oplus_131072
ಯಳಂದೂರು ತಾಲೂಕು ಅಗರ ಹೋಬಳಿ ಗ್ರಾಮದ ಕ್ರೀಡಾಕೂಟಕ್ಕೆ ಮಾಂಬಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲೇಶ್ ಶುಕ್ರವಾರ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ ಸೇರಿದಂತೆ ಅನೇಕರು ಇದ್ದರು.
Published on

ಯಳಂದೂರು: ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಹೆಚ್ಚು ಸಹಕಾರಿಯಾಗಿದೆ. ಹಾಗಾಗಿ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ಕ್ರೀಡೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಹೆಚ್ಚಬೇಕು ಎಂದು ಮಾಂಬಳ್ಳಿ ಗ್ರಾ.ಪಂ. ಅಧ್ಯಕ್ಷ ಮಲ್ಲೇಶ್ ಕರೆ ನೀಡಿದರು.

ಸಂತೇಮರಹಳ್ಳಿ ಜೆಎಸ್‌ಎಸ್ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಗರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಬಾರಿಯ ಅಗರ ಹೋಬಳಿ ಕ್ರೀಡಾಕೂಟದ ನೇತೃತ್ವವನ್ನು ಮಾಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-01 ವಹಿಸಿದೆ. ಕ್ರೀಡೆಯಲ್ಲಿ ನಮ್ಮ ದೇಶ ಇನ್ನಷ್ಟು ಸಾಧನೆ ಮಾಡಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡೆಯಲ್ಲಿ ನಾವು ಇನ್ನು ಪ್ರಗತಿ ಕಾಣಬೇಕಿದೆ. ಈಗ ನಗರ ಪ್ರದೇಶದಲ್ಲಿ ಕ್ರೀಡಾ ಅಕಾಡೆಮಿಗಳು ಹೆಚ್ಚುತ್ತಿದ್ದು ಇದರಲ್ಲಿ ನಗರ ಪ್ರದೇಶ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಅಗತ್ಯವಾದ ಕಾಯವನ್ನು ಹೊಂದಿರುವ ಮಕ್ಕಳಿದ್ದರೂ ಸಹ ಅವರಿಗೆ ಸೂಕ್ತ ತರಬೇತಿಯ ಕೊರತೆ ಇದೆ. ಆದರೂ ಕೂಡ ಸಾಧನೆ ಮಾಡುವ ಛಲ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಇಂತಹ ಮಕ್ಕಳನ್ನು ಆಯ್ಕೆ ಮಾಡಿ ಇವರಿಗೆ ಸೂಕ್ತ ತರಬೇತಿ ನೀಡುವ ಕೆಲಸವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.

ಬಿಇಒ ಕಾಂತರಾಜು ಮಾತನಾಡಿ, ಯಳಂದೂರು ತಾಲೂಕಿನಲ್ಲಿ ಮೂರು ಹೋಬಳಿಗಳನ್ನು ಮಾಡಿಕೊಂಡು ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಕ್ರೀಡಾಕೂಟದಲ್ಲೂ 8 ವೈಯಕ್ತಿಕ ಕ್ರೀಡೆಗಳು ಹಾಗೂ 4 ಸಾಮೂಹಿಕ ಕ್ರೀಡೆಗಳ ಆಯೋಜನೆ ಮಾಡಲಾಗಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಅವರು ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ನಮಗೆ ತಾಲೂಕು ಕೇಂದ್ರದಲ್ಲಿ ಮೈದಾನದ ಕೊರತೆ ಇರುವ ಕಾರಣ ಸಂತೇಮರಹಳ್ಳಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಮೂರು ಹೋಬಳಿ ಕ್ರೀಡಾಕೂಟಗಳು ನಡೆಯುತ್ತಿವೆ. ತಾಲೂಕು ಮಟ್ಟದ ವಾಲಿಬಾಲ್, ಥ್ರೋಬಾಲ್, ಖೋಖೋ ಹಾಗೂ ಕಬಡ್ಡಿ ಪಂದ್ಯಗಳನ್ನು ಬೇರೆ ಬೇರೆ ಶಾಲೆಗಳಲ್ಲಿ ಆಯೋಜನೆ ಮಾಡಿ, ಅಂತಿಮವಾಗಿ ನಡೆಯುವ ಅಥ್ಲೆಟಿಕ್ ಕ್ರೀಡೆಗಳನ್ನು ಈ ಶಾಲೆಯ ಆವರಣದಲ್ಲೇ ಆಯೋಜನೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ, ಶಾಲೆಯ ಟಿಪಿಒ ಶಾಂತರಾಜು, ಮುಖ್ಯಶಿಕ್ಷಕಿ ವಿಜಯಕುಮಾರಿ, ಪ್ರಕಾಶ್‌ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ಮಂಜುನಾಥ್, ಅಮ್ಮನಪುರ ಮಹೇಶ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net