

ಹಾಸನ: ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗೋಕುಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯ ಡಾ.ಆರ್.ನಿಖಿಲ್ ಭಟ್, ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿ ಸತ್ವಯುತ ಆಹಾರ ನೀಡಬೇಕು. ಮಕ್ಕಳು ಪಾಲಕರನ್ನು ಹೆಚ್ಚು ಅನುಸರಿಸುವುದರಿಂದ ಪಾಲಕರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು. ಮಕ್ಕಳನ್ನು ಆಟವಾಡಲು ಬಿಡುವುದರ ಜತೆಗೆ ಅಜ್ಜ-ಅಜ್ಜಿಯರ ಬಾಂಧವ್ಯವನ್ನು ಬೆಳೆಸಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಬೇಕು. ಒಳ್ಳೆಯ ಸಂಸ್ಕಾರ-ಸಂಸ್ಕೃತಿಯನ್ನು ಚಿಕ್ಕವಯಸ್ಸಿನಲ್ಲಿ ಬೆಳೆಸುವುದರಿಂದ ಮುಂದಿನ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು.
ವೈದ್ಯೆ ಡಾ.ಇಂಪನಾ, ಶಾಲೆ ಪ್ರಾಂಶುಪಾಲರಾದ ಬ್ಲೆಸ್ಸಿ ಶಾಮ್ ಶಿಕ್ಷಕರು ಇದ್ದರು.